ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಆಗುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-11-12 12:04 GMT

ಬೆಂಗಳೂರು, ನ. 12: `ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಕೊರತೆಯಾಗುವುದಿಲ್ಲ. ಕೇಂದ್ರ ಸರಕಾರವು ಒಡಿಶಾದ ಮಂದಾಕಿನಿ ಗಣಿಯಿಂದ ಕಲ್ಲಿದ್ದಲು ಪಡೆಯಲು ಅನುಮತಿ ನೀಡಿದೆ. ಮಹಾರಾಷ್ಟ್ರದಿಂದಲೂ ಕಲ್ಲಿದ್ದಲು ದೊರೆಯಲಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ತಮ್ಮ ಎರಡು ದಿನಗಳ ಹೊಸದಿಲ್ಲಿ ಪ್ರವಾಸ ಯಶಸ್ವಿಯಾಗಿದೆ. ವಿಶೇಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿ, ಮುಂಬರುವ ದಿನಗಳಲ್ಲಿ ಇನ್ನಷ್ಟು ಜನಪರ ಕಾರ್ಯಕೈಗೊಳ್ಳುವ ವಿಶ್ವಾಸ ಮೂಡಿಸಿದೆ' ಎಂದು ಇದೇ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.

`ಪ್ರಧಾನಿ ಮೋದಿ ನೂರು ದಿನಗಳಲ್ಲಿ ಕೈಗೊಂಡ ನಿರ್ಣಯಗಳು, ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಲವು ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆದರು. ವಿಶೇಷವಾಗಿ ಕೆಟಿಪಿಪಿ ಕಾಯ್ದೆ ತಿದ್ದುಪಡಿ ಕುರಿತು ಮಾಹಿತಿಯನ್ನು ಇತರ ರಾಜ್ಯಗಳೊಂದಿಗೆ ಹಂಚಿಕೊಂಡು ಅನುಷ್ಠಾನಗೊಳಿಸಲು ಸಲಹೆ ನೀಡುವೆ ಎಂದು ಅವರು ತಿಳಿಸಿದರು' ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

`ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಸುಮಾರು 2,100 ಕೋಟಿ ರೂ.ಬಾಕಿ ಇರುವ ಕುರಿತು ಚರ್ಚಿಸಲಾಗಿದ್ದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಈ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ’ ಎಂದು ಬೊಮ್ಮಾಯಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News