ದಿಢೀರ್ ದಿಲ್ಲಿಗೆ ತೆರಳಿದ ಜಗದೀಶ್ ಶೆಟ್ಟರ್: ರಾಜಕೀಯ ವಲಯದಲ್ಲಿ ಕುತೂಹಲ

Update: 2021-11-12 13:17 GMT

ಬೆಂಗಳೂರು, ನ. 12: ರಾಜ್ಯ ರಾಜಕೀಯ ವಲಯದಲ್ಲಿ `ಬಿಟ್ ಕಾಯಿನ್ ಹಗರಣ' ಭಾರೀ ಸಂಚಲವನ್ನೇ ಸೃಷ್ಟಿಸಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ಬೆನ್ನಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ದಿಢೀರ್ ಹೊಸದಿಲ್ಲಿಗೆ ಪ್ರಮಾಣ ಬೆಳೆಸಿರುವುದು ಅಚ್ಚರಿ ಮೂಡಿಸಿದೆ.

ಈ ಮಧ್ಯೆ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಪಡಸಾಲೆಯಿಂದಲೇ `ಮೂರನೇ ಮುಖ್ಯಮಂತ್ರಿ' ಮಾತುಗಳು ಕೇಳಿಬರುತ್ತಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಜಿಲ್ಲೆ ಹಾವೇರಿಯ ಹಾನಗಲ್ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ  ಸೋಲು ಕಂಡಿರುವುದು ಮತ್ತು ಬಿಟ್ ಕಾಯಿನ್ ಹರಗಣದಲ್ಲಿ ಪ್ರಭಾವಿಗಳ ಹೆಸರು ಕೇಳಿಬರುತ್ತಿರುವುದು ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಸಿಎಂ ಬೊಮ್ಮಾಯಿ ದಿಲ್ಲಿಯಿಂದ ವಾಪಸ್ಸಾಗುತ್ತಿದ್ದಂತೆ ಶೆಟ್ಟರ್ ಹುಬ್ಬಳ್ಳಿಯಿಂದ ದಿಲ್ಲಿಗೆ ವಿಮಾನದ ಮೂಲಕ ಮಧ್ಯಾಹ್ನ 2 ಗಂಟೆ ಸುಮಾರಿಗೆ ತೆರಳಿದ್ದಾರೆ. ಬಿಜೆಪಿ ವರಿಷ್ಠರ ಬುಲಾವ್ ಹಿನ್ನೆಲೆ ಜಗದೀಶ್ ಶೆಟ್ಟರ್ ದಿಲ್ಲಿಗೆ ಪ್ರಯಾಣ ಬೆಳೆಸಿರುವುದು ಹಲವು ಸಂಶಯಗಳನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಆಗಲಿದೆ ಎನ್ನುವ ಮಾತುಗಳು ಮತ್ತೆ ಚರ್ಚೆಗೆ ಬಂದಿವೆ.

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬಿಟ್ ಕಾಯಿನ್ ಹಗರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿ ಬಿಜೆಪಿಯ ಮೂರನೇ ಮುಖ್ಯಮಂತ್ರಿ ಸದ್ಯದಲ್ಲೇ ಬರಲಿದ್ದಾರೆ ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಸೃಷ್ಟಿಸಿದೆ. ಬಿಜೆಪಿ ವಲಯದಲ್ಲಿನ ಈ ಎಲ್ಲ ಬೆಳವಣಿಗೆಗಳ ನಡುವೆ ಶೆಟ್ಟರ್ ದಿಲ್ಲಿಗೆ ತೆರಳಿರುವುದು ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News