ಬೈಪಾಸ್ ನಿರ್ಮಾಣಕ್ಕೆ ವಿರೋಧ: ಬೆಳಗಾವಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ

Update: 2021-11-12 14:09 GMT

ಬೆಳಗಾವಿ, ನ. 12: ತಾಲೂಕಿನ ಇಲ್ಲಿನ ಹಲಗ-ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ನಗರದ ಹೊರವಲಯದಲ್ಲಿ ಉದ್ದೇಶಿತ ಕಾಮಗಾರಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಪರ್ಯಾಯ ಭೂಮಿ ಕೊಟ್ಟರೆ ಮಾತ್ರ ಹೆದ್ದಾರಿ ಕಾಮಗಾರಿಗೆ ಅವಕಾಶ ನೀಡುತ್ತಿವೆ ಎಂದು ರೈತರು ಪಟ್ಟು ಮುಂದುವರಿಸಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಲೆನೋವು ತಂದಿಟ್ಟಿದೆ.

ನಿನ್ನೆಯಷ್ಟೇ ಇಲ್ಲಿನ ಮಚ್ಚೆ ಗ್ರಾಮದ ರೈತರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ವಿಫಲಯತ್ನ ನಡೆಸಿ ಹೆದ್ದಾರಿ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ನಿನ್ನೆ ಸಂಜೆ ಅಧಿಕಾರಿಗಳು ಹಾಗೂ ರೈತರ ಮಧ್ಯೆ ನಡೆದ ಸಂಧಾನ ಸಭೆ ವಿಫಲವಾಗಿದ್ದು, ಯಾವುದೇ ಕಾರಣಕ್ಕೂ ಭೂಮಿ ಬಿಡಲು ನಾವು ಸಿದ್ಧರಿಲ್ಲ. ಭೂಮಿಗಾಗಿ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಹೆದ್ದಾರಿಗೆ ಸೋನ ಮಸೂರಿ ಅಕ್ಕಿ, ಗೋವಿನ ಜೋಳ, ಕಬ್ಬು ಸೇರಿದಂತೆ ಇತರೆ ಬೆಳೆ ಬೆಳೆಯುವ ಫಲವತ್ತಾದ ಭೂಮಿಯನ್ನು ಕಾಮಗಾರಿಗೆ ವಶಪಡಿಸಿಕೊಳ್ಳಲಾಗುತ್ತಿದೆ. ನಮಗೆ ಯಾವುದೆ ಪರಿಹಾರವೂ ಬೇಡ. ಇದೇ ರೀತಿಯ ಫಲವತ್ತಾದ ಜಮೀನನ್ನು ನಮಗೆ ಕೊಡಿ, ಇಲ್ಲದಿದ್ದರೆ ಈ ಜಮೀನು ಬಿಡಿ ಎಂದು ನಿನ್ನೆ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ರೈತ ಮಹಿಳೆಯರು ಮನವಿ ಮಾಡಿದ್ದಾರೆ.

ಪರ್ಯಾಯವಾಗಿ ಫಲವತ್ತಾದ ಭೂಮಿ ನೀಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಹಿರೇಮಠ್ ಹೇಳಿದ್ದಾರೆ. ಆದರೆ, ರೈತರು ಮತ್ತು ಜಿಲ್ಲಾಧಿಕಾರಿಗಳ ನಡುವೆ ನಡೆದ ಸಂಧಾನ ವಿಫಲವಾಗಿದೆ. ಪ್ರತಿಭಟನೆ ಮುಂದುವರೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಹಲಗಾ ಮತ್ತು ಮಚ್ಚೆ ಗ್ರಾಮಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News