×
Ad

ಶಿವಮೊಗ್ಗ; ತುಮರಿ ಸರಕಾರಿ ಶಾಲೆ ಭೂ ವಿವಾದ: ಅಧಿಕಾರಿಗಳ ಕ್ರಮ ಖಂಡಿಸಿ ಎಸ್ ಡಿಪಿಐ ಪ್ರತಿಭಟನೆ

Update: 2021-11-12 23:04 IST

ಶಿವಮೊಗ್ಗ, ನ.12: ತುಮರಿ ಗ್ರಾಮದ ಶಾಲೆ ಜಾಗವನ್ನು ಖಾಸಗಿ ವ್ಯಕ್ತಿಗೆ ಪರಭಾರೆ ಮಾಡಿರುವ ಮತ್ತು ಮೌಲಾನ ಆಜಾದ್ ಮಾದರಿ ಶಾಲೆ, ಈದ್ಗಾ ಮೊಹಲ್ಲಾ ಸಾಗರದ ಕಟ್ಟಡ ನಿರ್ಮಾಣಕ್ಕೆ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಕ್ರಮ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ(ಎಸ್.ಡಿ.ಪಿ.ಐ.) ಶಿವಮೊಗ್ಗದ ವತಿಯಿಂದ ಶುಕ್ರವಾರ  ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಯಿತು.

ಸಾಗರ ತಾಲೂಕಿನ ತುಮರಿ ಗ್ರಾಮದ ಸರ್ವೇ ನಂಬರ್ 24 ರಲ್ಲಿರುವ ಶಾಲೆ 1918 ರಿಂದ ಗ್ರಾಮದ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಾ ಬರುತ್ತಿದೆ. ಆದರೆ 2020 ಏಪ್ರಿಲ್ ನಲ್ಲಿ ಸಾಗತ ತಾಲೂಕಿನ ತಹಶೀಲ್ದಾರ್ ಅವರು ಸುಬ್ಬರಾಯ ಎನ್ನುವ ಖಾಸಗಿ ವ್ಯಕ್ತಿ ಹೆಸರಿಗೆ ಶಾಲೆಗೆ ಸಂಬಂಧಿಸಿದ 8 ಎಕರೆ ಜಾಗ ಖಾತೆ ಮಾಡಿಕೊಟ್ಟಿರುತ್ತಾರೆ. ಆದರೆ, ಶಾಲೆಗೆ ಸೇರಿದ ಸದರಿ ಜಾಗವು 1948 ರಿಂದ ಆ ಖಾಸಗಿ ಅಥವಾ ಅವರ ಕುಟುಂಬಸ್ಥರ ಸ್ವಾಧೀನದಲ್ಲಿರುವ ಜಾಗವನ್ನು ತಹಶೀಲ್ದಾರ್ ಅವರು ಯಾವುದೇ ಪರಿಶೀಲನೆ ನಡೆಸದೇ, ತನಿಖೆ ಮಾಡದೇ ಖಾತೆ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ಇದೇ ರೀತಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಈದ್ಗಾ ಮೊಹಲ್ಲಾ ಸಾಗರ. ಇದು ಕೂಡ ಮೌಲಾನ ಆಜಾದ್ ಮಾದರಿ ಶಾಲೆಯಾಗಿದ್ದು, 6 ರಿಂದ 9 ನೇ ತರಗತಿಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 50 ಮಕ್ಕಳು ದಾಖಲಾಗಿದ್ದು, ಈ ಕಟ್ಟಡದಲ್ಲಿ ಎರಡು ವರ್ಷಗಳ ಕಾಲ ವ್ಯಾಸಂಗ ಮಾಡಿದ್ದು, ಈ ಶಾಲೆ ಕಟ್ಟಡ ಶಿಥಿಲಗೊಂಡ ಕಾರಣ 24.9.2018 ರ ಪ್ರಕಾರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮೌಲಾನ ಆಜಾದ್ ಮಾದರಿ 4 ಹೆಚ್ಚುವರಿ ಕೊಠಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆಯಾಗಿರುತ್ತದೆ. ಈ ಸಂದರ್ಭದಲ್ಲಿ ಕೊಠಡಿಗಳು ಶಿಥಿಲಗೊಂಡ ಕಾರಣ 6 ರಿಂದ 9 ನೇ ತರಗತಿಯ ಸುಮಾರು 25 ಮಕ್ಕಳನ್ನು ಅಲ್ಲೇ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ಧೇಶ್ವರದಲ್ಲಿ ಒಂದು ಸಣ್ಣ ಕೊಠಡಿ ನೀಡಿದ್ದು, ಅದರಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಅಲ್ಲಿ ಯಾವುದೇ ಮೂಲ ಸೌಕರ್ಯ ಇರುವುದಿಲ್ಲ. ಪೋಷಕರು ಕೂಡ ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

ಈ ಬಗ್ಗೆ ಜಿಲ್ಲಾಡಳಿತಕ್ಕೆ, ಸಾಗರದ ಬಿಇಒ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಖಾಸಗಿ ಶಾಲೆಗಳ ಮಾಫಿಯಾದ ಒತ್ತಡಕ್ಕೆ ಮಣಿದು ಉಪ ವಿಭಾಗಾಧಿಗಳು ಮತ್ತು ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರುವುದಿಲ್ಲ. ಆದ್ದರಿಂದ ಕೂಡಲೇ ಸರ್ಕಾರಿ ಶಾಲೆ ಜಾಗವನ್ನು ಒತ್ತುವರಿ ಮಾಡಿದವರ ಮೇಲೆ ಕ್ರಮಕೈಗೊಳ್ಳಬಬೇಕು ಮತ್ತು ತುಮರಿ ಶಾಲೆ ಜಾಗ ಪರಭಾರೆ ಮಾಡಿದ ತಹಶೀಲ್ಡಾರ್ ಅವರನ್ನು ಅಮಾನತು ಮಾಡಬೇಕು. ಸಾಗರದ ಈದ್ಗಾ ಮೊಹಲ್ಲಾ ಮೌಲಾನ ಆಜಾದ್ ಮಾದರಿ ಶಾಲೆ ಉಳಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಎಸ್.ಡಿ.ಪಿ.ಐ. ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಇಮ್ರಾನ್ ಅಹಮ್ಮದ್, ಪದಾಧಿಕಾರಿಗಳಾದ ಸಲೀಂ ಖಾನ್, ಅಬ್ದುಲ್ ಮುಜೀಬ್, ಖಲೀಂವುಲ್ಲಾ, ಅಲ್ಲಾಭಕಶ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News