×
Ad

ಶಿವಮೊಗ್ಗ: ಮದುವೆ ಮನೆಯಲ್ಲಿ ಊಟ ಮಾಡಿದ್ದ ಹಲವರಿಗೆ ವಾಂತಿ, ಭೇದಿ; ಆಸ್ಪತ್ರೆಗೆ ದಾಖಲು

Update: 2021-11-12 23:47 IST

ಶಿವಮೊಗ್ಗ,ನ.12: ಮದುವೆ ಸಮಾರಂಭವೊಂದರಲ್ಲಿ ಊಟ ಮಾಡಿದ್ದ ಹಲವರಲ್ಲಿ ವಾಂತಿ, ಭೇದಿ, ತಲೆನೋವು ಕಾಣಿಸಿಕೊಂಡ ಘಟನೆ ಇಂದು ತಾಲೂಕಿನ ಆಲದಹಳ್ಳಿ ಸಮುದಾಯ ಭವನದಲ್ಲಿ‌ ನಡೆದಿದೆ.

ವಾಂತಿ- ಭೇದಿ ಕಾಣಿಸಿಕೊಂಡ ಕೂಡಲೆ ಎಲ್ಲರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಶಿವಮೊಗ್ಗ ತಾಲೂಕು ಆಲದಹಳ್ಳಿಯ ಸಮುದಾಯ ಭವನದಲ್ಲಿ ಶುಕ್ರವಾರ ಮದುವೆ ಸಮಾರಂಭ ಆಯೋಜಿಸಲಾಗಿತ್ತು. 

ಸಮಾರಂಭದಲ್ಲಿ ಊಟ ಮಾಡಿದ ಹಲವರು ಅಸ್ವಸ್ಥರಾಗಿದ್ದಾರೆ. ಕೂಡಲೆ ಅವರನ್ನು ಹೊಳಲೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಯಿತು. ವಾಂತಿ, ಭೇದಿ, ತಲೆನೋವು ಸೇರಿದಂತೆ ಹಲವು ಸಮಸ್ಯೆ ಹೆಚ್ಚಾದ ಹಿನ್ನೆಲೆ ಕೆಲವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಊಟ ಮಾಡಿದ್ದ ಸುಮಾರು 50 ಜನರಲ್ಲಿ ಇವತ್ತು ವಾಂತಿ, ಭೇದಿ ಕಾಣಿಸಿಕೊಂಡಿದ್ದು,  ಹೊಳಲೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. 26 ಮಂದಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಮುಂದುವರಿದಿದೆ. ಎಲ್ಲರ ಆರೋಗ್ಯದಲ್ಲೂ ಚೇತರಿಕೆ ಕಂಡಿದೆ. 

ಮೆಗ್ಗಾನ್ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತ್ ಸಿಇಒ ವೈಶಾಲಿ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಉತ್ತಮ ರೀತಿಯ ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಿದರು. 

ಸಮುದಾಯ ಆರೋಗ್ಯ ಕೇಂದ್ರದ ಬಳಿ ಹೆಚ್ಚುವರಿ ಆ್ಯಂಬುಲೆನ್ಸ್  ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಲಾಗಿದೆ. 

ಮದುವೆ ಸಮಾರಂಭದಲ್ಲಿ ಬಳಕೆಯಾದ ಆಹಾರ ಮತ್ತು ಜನರಿಗೆ ಒದಗಿಸಲಾಗಿದ್ದ ನೀರಿನ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಾಗಿದೆ. ವರದಿ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News