'ನನ್ನ ಸಾವಿಗೆ ನನ್ನ ಪಕ್ಷದ ಮುಖಂಡರೇ ಕಾರಣ': ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಯತ್ನಿಸಿದ ಪ.ಪಂ. ಸದಸ್ಯೆ
ಚಿಕ್ಕಮಗಳೂರು, ನ.13: 'ನನ್ನ ಸಾವಿಗೆ ನನ್ನ ಪಕ್ಷದ ಮುಖಂಡರೇ ಕಾರಣ' ಎಂದು ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡು ಪಟ್ಟಣ ಪಂಚಾಯತ್ ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎನ್.ಆರ್.ಪುರ ತಾಲೂಕಿನ ಶುಕ್ರವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಎನ್.ಆರ್.ಪುರ ಪಪಂ ಸದಸ್ಯೆ ಝುಬೈದಾ ಆತ್ಮಹತ್ಯೆಗೆ ಯತ್ನಿಸಿದವರು. ಇವರು ಕಳೆದ ರಾತ್ರಿ 5-6 ಬಗೆಯ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರೆನ್ನಲಾಗಿದ್ದು, ಅವರಿಗೆ ಎನ್.ಆರ್.ಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎನ್.ಆರ್.ಪುರ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ ಬಿಟ್ಟು ಕೊಡದಿರುವುದರಿಂದ ನೊಂದ ಇವರು ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾಗಿದೆ.
ಮೊದಲೇ ಆಗಿರುವ ಮಾತುಕತೆಯಂತೆ ಎನ್.ಆರ್.ಪುರ ಪಟ್ಟಣ ಪಂಚಾಯತ್ ನ ಹಾಲಿ ಅಧ್ಯಕ್ಷೆ ಸುರಯ್ಯಾ ಬಾನು ಅವರ ಅಧ್ಯಕ್ಷೆ ಅವಧಿ ಮುಗಿದಿದೆ. ಆದರೆ ಅವರು ಅಧ್ಯಕ್ಷೆ ಸ್ಥಾನ ಬಿಟ್ಟು ಕೊಡಲು ಮೀನಾಮೇಷ ಎಣಿಸುತ್ತಿದ್ದರೆನ್ನಲಾಗಿದೆ. ಇದೇ ವಿಚಾರವಾಗಿ ಮುಖಂಡರಲ್ಲೇ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇವೆಲ್ಲದರಿಂದ ಮನನೊಂದು ಝುಬೈದಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.