ಯಾದಗಿರಿ: ಆಟೋ ರಿಕ್ಷಾಕ್ಕೆ ಲಾರಿ ಢಿಕ್ಕಿ; ಮಗು ಸಹಿತ ಮೂವರು ಮೃತ್ಯು
Update: 2021-11-13 11:03 IST
ಯಾದಗಿರಿ, ನ.13: ಲಾರಿ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಎರಡೂವರೆ ತಿಂಗಳ ಮಗು ಸಹಿತ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರ ಹೊರವಲಯದ ಮುದ್ನಾಳ ಕ್ರಾಸ್ ಬಳಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ತಾಲೂಕಿನ ಕಂಚಗಾರಹಳ್ಳಿ ನಿವಾಸಿಗಳಾದ ಲಕ್ಷ್ಮಣ ನಾಮದೇವ (26), ಜಯರಾಮ ರಾಮಚಂದ್ರ ಚವಾಣ್ (45), ಕೃಷ್ಣ ಸಂತೋಷ (2.5 ತಿಂಗಳು) ಮೃತಪಟ್ಟವರಾಗಿದ್ದಾರೆ. ಆರು ಮಂದಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಮಧ್ಯರಾತ್ರಿ 12:30 ಸುಮಾರಿಗೆ ವಾಡಿ ಕಡೆಯಿಂದ ಆಗಮಿಸುತ್ತಿದ್ದ ಲಾರಿ, ಯಾದಗಿರಿಯಿಂದ ಕಂಚಗಾರಹಳ್ಳಿಗೆ ತೆರಳುತ್ತಿದ್ದ ಪ್ಯಾಸೆಂಜರ್ ಆಟೊ ರಿಕ್ಷಾ ಪರಸ್ಪರ ಢಿಕ್ಕಿಯಾಗಿದೆ ಎನ್ನಲಾಗಿದೆ. ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.