ಸಿಎಂ ಭೇಟಿಯಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ: ರಾಜಕೀಯ ವಲಯದಲ್ಲಿ ಕುತೂಹಲ
ಬೆಂಗಳೂರು, ನ. 13: ಹಲವು ದಿನಗಳಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಕುತೂಹಲ ಸೃಷ್ಟಿಸಿದೆ.
ಶನಿವಾರ ಇಲ್ಲಿನ ಆರ್.ಟಿ. ನಗರದಲ್ಲಿರುವ ಸಿಎಂ ನಿವಾಸಕ್ಕೆ ಆಗಮಿಸಿದ ರಮೇಶ್ ಜಾರಕಿಹೊಳಿ ತಮ್ಮ ಸಹೋದರ ಲಖನ್ ಜಾರಕಿಹೊಳಿ ಅವರೊಂದಿಗೆ ಸಿಎಂ ಭೇಟಿ ಮಾಡಿ ಸುಮಾರು 10 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಲಖನ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಡಿಸಲು ಕೋರಿದ್ದಾರೆ ಎಂದು ಗೊತ್ತಾಗಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಬೆಳಗಾವಿಯಿಂದ ತಮ್ಮ ಸಹೋದರನಿಗೆ ಟಿಕೆಟ್ ನೀಡಲು ಬೇಡಿಕೆ ಇಟ್ಟಿದ್ದಾರೆ. ಹಾಲಿ ಸದಸ್ಯ ಮಹಂತೇಶ್ ಕವಟಗಿಮಠ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಇದರ ನಡುವೆಯೇ ಜಾರಕಿಹೊಳಿ ತಮ್ಮ ಸಹೋದರನಿಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.
ಬೆಳಗಾವಿಯು ದ್ವಿಸದಸ್ಯ ಕ್ಷೇತ್ರವನ್ನು ಹೊಂದಿದ್ದು ಸ್ಥಳೀಯ ಸಂಸ್ಥೆಗಳಿಂದ ಇಬ್ಬರು ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಈಗಿರುವ ಬಲಾಬಲದ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಸ್ಥಾನವನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ. ದ್ವಿಸದಸ್ಯ ಹೊಂದಿರುವ ಕ್ಷೇತ್ರಕ್ಕೆ 2ನೆ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದೆಂಬ ಅಭಿಪ್ರಾಯವು ಬಿಜೆಪಿ ವಲಯದಲ್ಲಿ ಕೇಳಿಬಂದಿದೆ. ಆದರೆ, ಬೆಳಗಾವಿಯಿಂದ 2ನೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ 2ನೆ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಕಣಕ್ಕಿಳಿದರೆ ಅವರ ಗೆಲ್ಲುವ ಹೊಣೆಗಾರಿಕೆಯನ್ನು ಸ್ವತಃ ನಾನು ಮತ್ತು ಸಹೋದರ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೋಡಿಕೊಳ್ಳುತ್ತೇವೆ ಎಂದು ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಾಗ್ದಾನ ಮಾಡಿದ್ದಾರೆ. ದ್ವಿಸದಸ್ಯ ಕ್ಷೇತ್ರಕ್ಕೆ 2ನೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿಲ್ಲ. ವರಿಷ್ಠರು ಯಾವ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆಂದು ಕಾದುನೋಡಬೇಕು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆಂದು ತಿಳಿದುಬಂದಿದೆ.