ಚಿಕ್ಕಮಗಳೂರು: ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು

Update: 2021-11-13 16:28 GMT

ಚಿಕ್ಕಮಗಳೂರು, ನ.13: ಜಮೀನಿಗೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಗಂಡು ಕಾಡಾನೆಯೊಂದು ಸಾವಿಗೀಡಾಗಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯ ನಂದಿಬಟ್ಟಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ವರದಿಯಾಗಿದೆ.

ತರೀಕೆರೆ ತಾಲೂಕಿನ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಬಫರ್ ಜೋನ್ ಪ್ರದೇಶದ ನಂದಿಬಟ್ಟಲು ಗ್ರಾಮದ ಪರಮೇಶ್ ಎಂಬವರ ಜಮೀನು ಸಮೀಪದಲ್ಲಿ ಕಾಡಾನೆ ಶುಕ್ರವಾರ ಮೃತಪಟ್ಟಿದ್ದು, ಶನಿವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದೆ. ಬೆಳೆ ರಕ್ಷಣೆಗಾಗಿ ಅಕ್ರಮವಾಗಿ ಜಮೀನಿಗೆ ಹಾಕಲಾಗಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಸಲಗ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.

30 ವರ್ಷದ ಒಂಟಿ ಸಲಗದ ಹೊಟ್ಟೆಯ ಕೆಳ ಭಾಗದಲ್ಲಿ ಹಾಗೂ ದೇಹದ ಹಲವು ಭಾಗದಲ್ಲಿ ವಿದ್ಯುತ್ ಹರಿದು ಸುಟ್ಟಿರುವ ಗಾಯಗಳಾಗಿವೆ ಎಂದು ತಿಳಿದು ಬಂದಿದ್ದು, ಜಮೀನು ಮಾಲಕ ಪರಮೇಶ್ ತಲೆ ಮರೆಸಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಈ ಭಾಗದಲ್ಲಿ ಅಕ್ರಮ ವಿದ್ಯುತ್ ಬೇಲಿಗೆ ಇತ್ತೀಚೆಗೆ 4 ಕಾಡಾನೆಗಳು ಬಲಿಯಾಗಿವೆ ಎಂದು ತಿಳಿದು ಬಂದಿದೆ.

ಭದ್ರಾ ಹುಲಿ ಮೀಸಲು ಅರಣ್ಯ ವಿಭಾಗದ ಪಶುವೈದ್ಯಾಧಿಕಾರಿ ಯಶಸ್ ಲಿಂಗದಹಳ್ಳಿ ಪಶುವೈದ್ಯಾಧಿಕಾರಿ ಬಸವರಾಜ್ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರತ್ನಪ್ರಭ, ವಲಯರಣ್ಯಾಧಿಕಾರಿ ನವೀನ್, ವನ್ಯಜೀವಿ ಪರಿಪಾಲಕ ಜಿ.ವೀರೇಶ್, ಲಿಂಗದಹಳ್ಳಿ ಪೊಲೀಸ್ ಠಾಣಾಧಿಕಾರಿ ರವಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News