ಬಿಟ್‍ಕಾಯಿನ್ ಪ್ರಕರಣದಲ್ಲಿ ಭಾಗಿಯಾದವರ ಹೆಸರು ಬಹಿರಂಗಕ್ಕೆ ಡಾ.ಜಿ.ಪರಮೇಶ್ವರ್ ಒತ್ತಾಯ

Update: 2021-11-13 14:32 GMT

ತುಮಕೂರು,ನ.13:ಬಿಟ್ ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿರುವವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈಗಾಗಲೇ ಸರಕಾರ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸುತ್ತಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಹಾಗಾಗಿ ಯಾವ ಪಕ್ಷದ ರಾಜಕಾರಣಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಜನತೆಗೆ ತಿಳಿಸಬೇಕು ಎಂದರು. 

ಸಾವಿರಾರು ಕೋಟಿ ರೂ. ಹಗರಣ ಇದಾಗಿದೆ.ಈ ಹಗರಣದಲ್ಲಿ ಕಾಂಗ್ರೆಸ್‍ನವರು ಭಾಗಿಯಾಗಿದ್ದಾರೆಯೇ ಅಥವಾ ಭಾರತೀಯ ಜನತಾಪಾರ್ಟಿಯವರು ಭಾಗಿಯಾಗಿದ್ದಾರೆಯೇ ಎಂಬುದನ್ನು ಬಹಿರಂಗಪಡಿಸಿ. ಇಲ್ಲದಿದ್ದರೆ ವಿನಾ ಕಾರಣ ನಾವು ಮತ್ತು ನೀವು ಪರಸ್ಪರ ಕೆಸರೆರಚಾಡುವ ಕೆಲಸ ಮಾಡಬೇಕಾಗುತ್ತದೆ.ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಎಂದೇ ಹೇಳಲಾಗುತ್ತಿರುವ ಶ್ರೀಕಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಆತ ಹಲವರ ಹೆಸರುಗಳನ್ನು ಹೇಳುತ್ತಿದ್ದಾನೆ ಎಂಬ ಮಾಹಿತಿ ಇದೆ. ಆದ್ದರಿಂದ ಆ ಹೆಸರುಗಳನ್ನು ಬಹಿರಂಗಪಡಿಸಿ ಎಂದು ಅವರು ಆಗ್ರಹಿಸಿದರು. 

ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವವರೆ ಇದಕ್ಕೆಲ್ಲ ಕಾರಣೀಭೂತರಾಗಬೇಕಾಗುತ್ತದೆ.ಹಾಗಾಗಿ ನಾವು ಒತ್ತಾಯ ಮಾಡುತ್ತಿ ದ್ದೇವೆ ಅಷ್ಟೆ.ಇದನ್ನು ರಾಜಕೀಯ ಉದ್ದೇಶ ಎಂದು ಸರಕಾರ ಭಾವಿಸಬಾರದು.ಮುಖ್ಯಮಂತ್ರಿಗಳ ಬಳಿ ಏನು ಮಾಹಿತಿ ಇದೆಯೋ ಅದನ್ನು ಬಹಿರಂಗಪಡಿಸಬೇಕು.ನಮ್ಮ ದೇಶದ ಕಾನೂನಿನಲ್ಲಿ ವರ್ಚ್ಯುಯಲ್ ಕರೆನ್ಸಿ ವರ್ಗಾವಣೆಗೆ ಅವಕಾಶ ಇಲ್ಲ.ಹಾಗಾಗಿ ಖಂಡಿತವಾಗಿಯೂ ಅವ್ಯವಹಾರ ನಡೆದಿದೆ.ಯಾರ ಹೆಸರಿಗೆ ಹಣ ವರ್ಗಾವಣೆ ಆಗಿದೆ,ಯಾರು ತೆಗೆದುಕೊಂಡಿದ್ದಾರೆ ಎಂಬುದು ರಾಜ್ಯದ ಜನತೆಗೆ ತಿಳಿಯಬೇಕಿದೆ ಎಂದರು. 

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಏನಿತ್ತು, ಯಾರು ಹಗರಣ ಮಾಡಿದ್ದಾರೆ ಎನ್ನುವುದನ್ನಾದರೂ ಹೇಳಿ. ಅದನ್ನು ಬಿಟ್ಟು ಸುಖಾ ಸುಮ್ಮನೆ ದೂಷಣೆ ಮಾಡುವ ಕೆಲಸ ಮಾಡಬಾರದು.ರಾಜ್ಯದ ಆಡಳಿತ ನಡೆಸುತ್ತಿರುವ ನಿಮ್ಮ ಮೇಲೆ ಜನತೆಗೆ ಸತ್ಯಾಂಶ ತಿಳಿಸುವ ಜವಾಬ್ದಾರಿ ಇದೆ.ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನದ ಬಗ್ಗೆ ಜ್ಞಾನ ಹೊಂದಿರುವ ಅಧಿಕಾರಿಗಳು ಇದ್ದಾರೆ. ಅವರನ್ನು ಬಳಸಿಕೊಂಡು ತಪ್ಪಿತಸ್ಥರನ್ನು ಪತ್ತೆಹಚ್ಚುವ ಕೆಲಸ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News