×
Ad

ಬಿಟ್ ಕಾಯಿನ್ ಆರೋಪ: ಕಾಂಗ್ರೆಸ್‌ನವರು ಖಾಲಿ ಡಬ್ಬ ಬಾರಿಸಿದ ಹಾಗೆ ಬಾರಿಸುತ್ತಿದ್ದಾರೆ; ಸಚಿವ ಈಶ್ವರಪ್ಪ ವ್ಯಂಗ್ಯ

Update: 2021-11-13 21:10 IST

ಶಿವಮೊಗ್ಗ, ನ.13: ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಯ ಯಾವುದೇ ನಾಯಕ, ಸಚಿವ, ಮುಖ್ಯಮಂತ್ರಿ, ಪದಾಧಿಕಾರಿಗಳು ಯಾರಾದ್ರೂ ಒಬ್ಬರು ಇದ್ದಾರೆ ಎನ್ನುವುದನ್ನು ಒಂದು ಪೀಸ್ ದಾಖಲೆ  ತೋರಿಸಲಿ, ಕಾಂಗ್ರೆಸ್‌ನವರು ಖಾಲಿ ಡಬ್ಬ ಬಾರಿಸಿದ ಹಾಗೆ ಬಾರಿಸುತ್ತಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. 

ಶಿವಮೊಗ್ಗದಲ್ಲಿ ಬಿಟ್ ಕಾಯಿನ್ ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್‌ನವರಿಗೆ ಏನು ಉದ್ಯೋಗವಿಲ್ಲ. ಉದ್ಯೋಗ ಇಲ್ಲದಿರುವುದಕ್ಕೆ ಬಿಟ್ ಕಾಯಿನ್ ಪ್ರಕರಣ ಎತ್ತುಕೊಂಡಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ನಾಯಕರಿದ್ದಾರೆ ಎನ್ನುವುದಕ್ಕೆ ಒಂದು ಪೀಸ್ ದಾಖಲೆ ತೋರಿಸಿದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬರಿ ಪುಕ್ಸಟೆ ನಮ್ಮ ಬಳಿ ದಾಖಲೆ ಇದೆ. ನಾವು ಬಿಡುಗಡೆ ಮಾಡ್ತೀವಿ. ಈ ರೀತಿ ಹೇಳಿ ಹೇಳಿ ಅವರು ಅಧಿಕಾರ ಕಳೆದುಕೊಂಡರು .ಗೌರವನ್ನು ಕಳೆದುಕೊಳ್ಳುತ್ತಿದ್ದಾರೆ. ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಯಾವ ಮುಲಾಜಿಲ್ಲ. ಕಾಂಗ್ರೆಸ್‌ನ ಡಿ.ಕೆ ಶಿವಕುಮಾರ್,ಸಿದ್ದರಾಮಯ್ಯ,ಪ್ರಿಯಾಂಕ್ ಖರ್ಗೆ ಅವರು ಬಾಯಿ ಚಪಲಕ್ಕೆ  ಬೇಕಾದದ್ದನ್ನು ಹೇಳುತ್ತಿದ್ದಾರೆ.ಈ ಬಗ್ಗೆ ಒಂದು ದಾಖಲೆ ತೋರಿಸಿದರೆ ನಾವು ನಿಮ್ಮನ್ನು ಮೆಚ್ಚುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ನದ್ದು ಬರೀ ಸಿಕ್ಕಾಪಟ್ಟೆ ಶಬ್ದ ಅಷ್ಟೇ. ತುಂಬಿದ ಕೊಡ ಯಾವಾಗಲೂ ಶಬ್ದ ಮಾಡುವುದಿಲ್ಲ. ಸುಮ್ಮನೆ ಶಬ್ದ ಮಾಡ್ತಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಇಂತಹವರು ಇದ್ದಾರೆ ಅಂತ ಸ್ಪಷ್ಟವಾಗಿ ಹೇಳಿದರೆ ಖಂಡಿತ ಅವರ ವಿರುದ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನ ಪರಿಷತ್ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಧಾನ ಪರಿಷತ್ ಚುನಾವಣೆ ಬಂದಿದೆ. 25 ಕ್ಷೇತ್ರದಲ್ಲಿ ಈ ಚುನಾವಣೆ ನಡೆಯಲಿದ್ದು, ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಕೋರ್ ಕಮಿಟಿಗೆ ನೀಡಿದ್ದಾರೆ. ಈ ಪಟ್ಟಿ ಕೇಂದ್ರ ನಾಯಕರ ಕೈ ಸೇರಲಿದ್ದು, ಇನ್ನೆರಡು ದಿನಗಳಲ್ಲಿ ಅಂತಿಮ ಹೆಸರನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News