ಬಿಟ್ ಕಾಯಿನ್ ಪ್ರಕರಣ ಸಾಧ್ಯವಾದಷ್ಟು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ: ಡಿ.ಕೆ.ಶಿವಕುಮಾರ್

Update: 2021-11-13 17:10 GMT

ಬೆಂಗಳೂರು, ನ.13: ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಎಲ್ಲಿಗೂ ಓಡಿ ಹೋಗುವುದಿಲ್ಲ, ನಾವೆಲ್ಲರೂ ಇಲ್ಲೇ ಇರುತ್ತೇವೆ. ನಾವು ನಿಮ್ಮಿಂದ ಸಾಧ್ಯವಾದಷ್ಟು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ. ಸಮಯ ಬಂದಾಗ ನಾವು ಆ ಬಗ್ಗೆ ಮಾತನಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣವನ್ನು ಕಾಂಗ್ರೆಸ್ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಈ ಮೇಲಿನಂತೆ ಉತ್ತರಿಸಿದರು.

ದಾಖಲೆ ಬಿಡುಗಡೆ ಮಾಡುತ್ತೇವೆ ಎನ್ನುತ್ತಿದ್ದೀರಿ, ನಾವು ಕಾಯುತ್ತಿದ್ದೇವೆ ಎಂಬ ಪ್ರಸ್ತಾಪಕ್ಕೆ, ‘ಈ ಪ್ರಕರಣದ ವಿಚಾರವಾಗಿ ಒಂದೊಂದೇ ಮಾಹಿತಿ ಹೊರಬರುತ್ತಿದೆಯಲ್ಲ. ಸರಕಾರ ತನ್ನ ನಿಲುವು ಬದಲಿಸಿದೆ. ಅವರು ಏನೆಲ್ಲ ವಶಪಡಿಸಿಕೊಂಡಿದ್ದಾರೋ ಈಗ ಅದರ ದಾಖಲೆಯೇ ಇಲ್ಲವೆಂದು ಮಾಹಿತಿ ತಿರುಚುತ್ತಿದ್ದಾರೆ ಎಂಬ ಮಾಧ್ಯಮ ವರದಿ ನೋಡಿದ್ದೇನೆ. ಅದರಲ್ಲೇ ನಿಮಗೆ ಉತ್ತರ ಸಿಗುತ್ತದೆ ಎಂದು ಶಿವಕುಮಾರ್ ಹೇಳಿದರು.

ಕಾಂಗ್ರೆಸ್‍ನವರು ದಾಖಲೆ ಕೊಟ್ಟು ಮಾತನಾಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಶಿವಕುಮಾರ್, ‘ಮಾಹಿತಿ, ದಾಖಲೆಗಳನ್ನು ಜನರ ಮುಂದಿಡುವುದು ಸರಕಾರದ ಕೆಲಸ. ಅವರು ಯಾವ ದಾಖಲೆ ಕೊಟ್ಟಿದ್ದಾರೋ ಅದರ ಆಧಾರದ ಮೇಲೆ ನಾವು ಮಾತನಾಡುತ್ತಿದ್ದೇವೆ. ನಾನು ನಿನ್ನೆ ಅದರ ಆಧಾರದ ಮೇಲೆ ಮಾತನಾಡಿದ್ದೇನೆ. ಈಗ ಅವರು ನಮ್ಮ ಬಳಿ ದಾಖಲೆ ಇಲ್ಲ ಎಂದು ಹೇಳುತ್ತಿದ್ದಾರೆ. ಪ್ರಕರಣದಲ್ಲಿ ದಾಖಲಾಗಿರುವ ಚಾರ್ಜ್ ಶೀಟ್ ದಾಖಲೆ ಕೇಳಿದ್ದೇನೆ. ನಿಮ್ಮ ಹೋಂವರ್ಕ್ ನಡೆದಂತೆ ನಮ್ಮದೂ ನಡೆಯುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ಬಿಟ್ ಕಾಯಿನ್ ವಿಚಾರವನ್ನು ನಿರ್ಲಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ನಾನು ಸರಿಯಾದ ಮಾಹಿತಿ ಇಲ್ಲದೆ ಮಾತನಾಡುವುದಿಲ್ಲ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ಕೆಪಿಸಿಸಿ ಸರಿಯಾದ ದಾಖಲೆ ಇದ್ದರೆ ಮಾತ್ರ ಮಾತನಾಡುತ್ತದೆ’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News