×
Ad

ರ್‍ಯಾಲಿ ಆಫ್ ಚಿಕ್ಕಮಗಳೂರು ಕ್ರೀಡೆಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಚಾಲನೆ

Update: 2021-11-13 23:59 IST

ಚಿಕ್ಕಮಗಳೂರು, ನ.13: ದಿ ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟಮಟ್ಟದ ಟಿಎಸ್‍ಡಿ ರ್ಯಾಲಿಗೆ ನಗರ ಸಮೀಪದ ಕೈಮರದ ಸಿರಿ ನೇಚರ್ ರೂಸ್ಟ್ ಹೊಟೇಲ್ ಆವಣದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೋವಿಡ್ ಮತ್ತಿತರ ಕಾರಣಗಳಿಂದ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತು. ಸದ್ಯ ಕೋವಿಡ್ ಕ್ಷೀಣಗೊಂಡಿರುವುದರಿಂದ ಕಾಫಿನಾಡಿನಲ್ಲಿ ಮೋಟರ್ಸ್ ಸ್ಪೋಟ್ಸ್, ರ್ಯಾಲಿಗಳನ್ನು ಆಯೋಜನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು ವೈವಿದ್ಯಮಯ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿ ಎಂದು ಆಶಿಸಿದರು.

ದಿ ಮೋಟರ್ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಜಯಂತ್ ಪೈ ಮಾತನಾಡಿ, ಈ ರ್ಯಾಲಿಯು ನ್ಯಾವಿಗೇಶನ್ ಮತ್ತು ಲೆಕ್ಕಚಾರಿಕವಾಗಿದ್ದು, ಟೈಪ್ ಸ್ಪೀಡ್ ಡಿಸ್ಟೆನ್ಸ್ ಫಾರ್ಮೆಟ್‍ನಲ್ಲಿ ರ್ಯಾಲಿ ನಡೆಯಲಿದೆ. ರ್ಯಾಲಿಯ ಲೆಗ್ 1ರಲ್ಲಿ 180 ಕಿ. ಮೀ. ಮತ್ತು ಲೆಗ್2ರಲ್ಲಿ 60 ಕಿಮೀ. ಸೇರಿದಂತೆ ಒಟ್ಟು 240 ಕಿಮೀ ರ್ಯಾಲಿ ಇದಾಗಿದೆ. ಸಂಜೆ 4ಕ್ಕೆ ಚಿಕ್ಕಮಗಳೂರು ನಗರದಿಂದ ಹೊರಡುವ ರ್ಯಾಲಿ ರಾತ್ರಿ 7.30 ಕ್ಕೆ ಮೂಡಿಗೆರೆಯ ಡಿ ಕಾಫಿ ಕೋರ್ಟ್ ತಲುಪಲಿದೆ. ಭೋಜನ ವಿರಾಮದ ಬಳಿಕ 8:30ಕ್ಕೆ ಪುನಃ ರ್ಯಾಲಿ ಪ್ರಾರಂಭವಾಗಿ ರಾತ್ರಿ 10.30ಕ್ಕೆ ಚಿಕ್ಕಮಗಳೂರು ತಲುಪಲಿದೆ. ರ್ಯಾಲಿಯಲ್ಲಿ ಗೌಪ್ಯ ಚೆಕ್ ಪಾಯಿಂಟ್‍ಗಳನ್ನು ಅಳವಡಿಸಲಾಗಿದೆ ಎಂದರು.

ರ್‍ಯಾಲಿಯಲ್ಲಿ  ಪ್ರೊ ಎಕ್ಸ್ಪರ್ಟ್ ವಿಭಾಗ, ಪ್ರೊ ಸ್ಟಾಕ್ ವಿಭಾಗ, ಕಪಲ್ ವಿಭಾಗ, ಕಾರ್ಪೊರೇಟ್ ವಿಭಾಗ, ನಾವೀಸ್ ವಿಭಾಗ, ಮಹಿಳಾ ವಿಭಾಗ ಸೇರಿದಂತೆ ಬೇರೆ ಬೇರೆ ವಿಭಾಗಗಳನ್ನು ಮಾಡಲಾಗಿದೆ. ದಿ ರ್ಯಾಲಿ ಆಫ್ ಚಿಕ್ಕಮಗಳೂರಿನಲ್ಲಿ 40 ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಸಿಇಒ ಜಿ.ಪ್ರಭು, ದಿ ಮೋಟರ್ ಸ್ಪೋಟ್ರ್ಸ್  ಕ್ಲಬ್‍ನ ಉಪಾಧ್ಯಕ್ಷ ಫಾರುಕ್ ಅಹ್ಮದ್, ಜಂಟಿ ಕಾರ್ಯದರ್ಶಿ ಅಭಿಜಿತ್ ಪೈ, ಕಾರ್ಯಕ್ರಮ ಆಯೋಜಕ ದಿಲೀಪ್, ಸದಸ್ಯ ದಿವಿನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News