ಕೋಲಾರ: ದತ್ತ ಮಾಲಾಧಾರಿಗಳಿದ್ದ ಬಸ್ ಮೇಲೆ ಕಲ್ಲೆಸೆತ: ಮೂವರಿಗೆ ಗಾಯ
ಕೋಲಾರ, ನ.14: ಚಿಕ್ಕಮಗಳೂರಿನ ಬಾಬಾಬುಡಾನ್ ಗಿರಿ ದತ್ತ ಪೀಠಕ್ಕೆ ಹೊರಟಿದ್ದ ಮಾಲಾಧಾರಿಗಳಿದ್ದ ಬಸ್ ಮೇಲೆ ಕಿಡಿಗೇಡಿಗಳು ಕಲ್ಲೆಸೆದ ಘಟನೆ ಶನಿವಾರ ರಾತ್ರಿ ಕೋಲಾರ ನಗರದಲ್ಲಿ ನಡೆದಿರುವುದು ವರದಿಯಾಗಿದೆ.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೋಲಾರದ ಕ್ಲಾಕ್ ಟವರ್ ಬಳಿಯ ವಿಶಾಲ್ ಮಾರ್ಟ್ ಎದುರು ಶನಿವಾರ ರಾತ್ರಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಈ ಕಾರಣಕ್ಕೆ ಅಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಈ ವೇಳೆ ಅದೇ ಮಾರ್ಗವಾಗಿ 25 ದತ್ತ ಮಾಲಾಧಾರಿಗಳಿದ್ದ ಬಸ್ ಆಗಮಿಸಿದೆ. ಬಸ್ಸಿನಲ್ಲಿದ್ದವರು ಘೋಷಣೆಗಳನ್ನು ಕೂಗುತ್ತಿದ್ದರೆನ್ನಲಾಗಿದೆ. ಆಗ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದರೆನ್ನಲಾಗಿದೆ. ಇದರಿಂದ ಬಸ್ಸಿನ ಗಾಜಿಗೆ ಹಾನಿಯಾಗಿದ್ದಲ್ಲದೆ, ಮೂವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಶ್ರೀರಾಮ ಸೇನೆ ಮುಖಂಡ ಅರುಣ್ ನೀಡಿರುವ ದೂರಿನಂತೆ 100 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ಕಿಡಿಗೇಡಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಶ್ರೀರಾಮಸೇನೆ ಪ್ರತಿಭಟನೆ
ಕೃತ್ಯ ಖಂಡಿಸಿ ತಡರಾತ್ರಿ ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಶ್ರೀರಾಮಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು .ಈ ವೇಳೆ ಪ್ರತಿಭಟನಾಕಾರರ ಮನವೊಲಿಸಿದ ಪೊಲೀಸರು, ಆರೋಪಿಯನ್ನು ಶೀಘ್ರ ಬಂಧಿಸುವ ಭರವಸೆ ನೀಡಿ, ಭದ್ರತೆ ಒದಗಿಸಿ ಬಸ್ ನಲ್ಲಿದ್ದವರನ್ನು ಬೇರೆ ವಾಹನ ವ್ಯವಸ್ಥೆ ಕಲ್ಪಿಸಿ ಚಿಕ್ಕಮಗಳೂರಿಗೆ ಕಳುಹಿಸಿದರು.