ಒತ್ತುವರಿ ಮಾಡಿಕೊಂಡ ಮುಡಾ ಆಸ್ತಿಯನ್ನು ಮಂಜೂರು ಮಾಡುವಂತೆ ಕೇಳಲು ಅವಕಾಶವಿಲ್ಲ: ಹೈಕೋರ್ಟ್

Update: 2021-11-14 15:26 GMT

ಬೆಂಗಳೂರು, ನ. 14: ಅತಿಕ್ರಮವಾಗಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(`ಮೂಡಾ') ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ನಂತರ ಅದನ್ನು ಮಂಜೂರು ಮಾಡುವಂತೆ ಕೋರಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದಿರುವ ಹೈಕೋರ್ಟ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ)ಮನೆಯಲ್ಲಿ ಅಕ್ರಮವಾಗಿ ಸೇರಿಕೊಂಡಿದ್ದ ವ್ಯಕ್ತಿಗೆ 6 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ತಾನು ವಾಸಿಸುತ್ತಿರುವ ಮನೆಯನ್ನು ತನ್ನ ಹೆಸರಿಗೆ ಮಂಜೂರು ಮಾಡಲು ನಿರಾಕರಿಸುತ್ತಿರುವ ಮುಡಾ ಕ್ರಮ ಪ್ರಶ್ನಿಸಿ ಮೈಸೂರಿನ ಜಿ.ಎಂ.ಮಹದೇವ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ವಿಚಾರಣೆ ನಡೆಸಿ ಈ ಆದೇಶ ಮಾಡಿದೆ.

ಪೀಠ ತನ್ನ ಆದೇಶದಲ್ಲಿ, ಅರ್ಜಿದಾರ ತಾನೊಬ್ಬ ದಮನಿತ ಸಮುದಾಯದ ವ್ಯಕ್ತಿ ಎಂದು ಹೇಳಿಕೊಂಡು 2000ದಿಂದ ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ, ದಮನಿತ ವರ್ಗಕ್ಕೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ಸಾರ್ವಜನಿಕ ಸ್ವತ್ತನ್ನು ಒತ್ತುವರಿ ಮಾಡಿಕೊಳ್ಳಲಿಕ್ಕಾಗಲೀ, ಅಥವಾ ತಾನು ಹಲವು ವರ್ಷಗಳಿಂದ ಒತ್ತುವರಿ ಮಾಡಿರುವ ಮನೆಯಲ್ಲಿ ವಾಸವಿದ್ದೀನಿ ಎಂಬ ಕಾರಣಕ್ಕಾಗಲೀ ಅದನ್ನು ತನ್ನ ಹೆಸರಿಗೆ ಮಂಜೂರು ಮಾಡುವಂತೆ ಕೋರಲು ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ. 

ಸಾರ್ವಜನಿಕ ಸ್ವತ್ತನ್ನು ದಶಕಗಳ ಕಾಲ ಒತ್ತುವರಿಸಿದ್ದಕ್ಕೆ ಅರ್ಜಿದಾರನಿಗೆ ವಾರ್ಷಿಕ 30 ಸಾವಿರದಂತೆ 6 ವಾರಗಳಲ್ಲಿ ಮುಡಾಗೆ ದಂಡ ಪಾವತಿಸುವಂತೆ ಆದೇಶಿಸಿದೆ. ಹಾಗೆಯೇ, ಅರ್ಜಿದಾರನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮುಡಾಗೆ ಆದೇಶಿಸಿದೆ.
ಅರ್ಜಿದಾರ ಮಹದೇವ ತಾನು ದಮನಿತ ವರ್ಗಕ್ಕೆ ಸೇರಿದ ವ್ಯಕ್ತಿ, ಮೂಡಾ ಎಂಜಿನಿಯರ್ ಮನೆಯನ್ನು ನೀಡುವುದಾಗಿ ಮೌಖಿಕ ಭರವಸೆ ನೀಡಿದ್ದರಿಂದ ಮನೆಯಲ್ಲಿ ವಾಸವಿದ್ದೆ. ಆದರೆ, ಮುಡಾ 2021ರ ಜನವರಿ 25ರಂದು ದಾಖಲೆ ಪ್ರಕಾರ ಖಾಲಿ ಇರುವ ಮನೆಗಳನ್ನು ಹರಾಜು ಮಾಡುವುದಾಗಿ ಆದೇಶ ಹೊರಡಿಸಿದೆ. ಇದರಿಂದಾಗಿ ತನ್ನ ಹಕ್ಕುಗಳು ಉಲ್ಲಂಘನೆಯಾಗಿವೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ಪೀಠ, ಅರ್ಜಿದಾರ ಮೇಲಧಿಕಾರಿಗಳನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ ಹಾಗೂ ಕರ್ನಾಟಕ ಎಸ್ಸಿ-ಎಸ್ಟಿ ಆಯೋಗಕ್ಕೆ ಎಳೆಯುವ ಮೂಲಕ ಕಿರುಕುಳ ನೀಡಿರುವುದು ಕಂಡುಬರುತ್ತಿದೆ. ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಮನೆ ಎಂಬುದು ತಿಳಿದೂ ಆಯೋಗಗಳು ಸೌಮ್ಯವಾಗಿ ವರ್ತಿಸಿರುವುದು ವಿಚಿತ್ರವಾಗಿದೆ.

ಎಸ್ಸಿ-ಎಸ್ಟಿ ಆಯೋಗದ ಆದೇಶದ ವಿರುದ್ಧ ಮುಡಾ ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಪ್ರತಿವಾದಿ ಮಹದೇವ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವುದಾಗಿ ತಿಳಿಸಿದ್ದಾರೆ. ಹಾಗಿದ್ದೂ, ಅತಿಕ್ರಮಿತ ಮನೆಯನ್ನು ಉಳಿಸಿಕೊಡುವಂತೆ ನ್ಯಾಯಾಲಯದಿಂದ ರಕ್ಷಣೆ ಕೋರುತ್ತಾರೆ. ಅರ್ಜಿದಾರ ಸಾರ್ವಜನಿಕ ಜೀವನ ಮತ್ತು ನೈತಿಕತೆಯಲ್ಲಿ ನಿಷ್ಕಪಟರಲ್ಲ, ಇಂತಹ ವ್ಯಕ್ತಿಗಳಿಂದ ನಿಜವಾಗಿ ತುಳಿತಕ್ಕೊಳಗಾದ ವರ್ಗಗಳ ಬಗ್ಗೆ ಇರುವ ಅನುಕಂಪವನ್ನು ಹಾಳು ಮಾಡುತ್ತಾರೆ. ಇಂತಹ ವಿಚಾರಗಳನ್ನು ಕಠಿಣವಾಗಿ ಹತ್ತಿಕ್ಕಬೇಕಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News