50 ಲಕ್ಷ ಸದಸ್ಯರನ್ನು ಮಾಡುವ ಗುರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2021-11-14 16:35 GMT

ಬೆಂಗಳೂರು, ನ. 14: `ಮುಂಬರಲಿರುವ 2023ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಬೇಕು. ಕನಿಷ್ಠ 50 ಲಕ್ಷ ಸದಸ್ಯರನ್ನು ಮಾಡುವ ಗುರಿ ಇದ್ದು, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಇತರೆ ಘಟಕಗಳು ತಲಾ 1 ಲಕ್ಷ ಸದಸ್ಯತ್ವ ಮಾಡಬೇಕು. ಪ್ರತಿ ಮನೆ, ಮನೆಗೂ ಹೋಗಿ ಜನರ ಹೃದಯ ಗೆಲ್ಲಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಪಂಡಿತ್ ಜವಾಹರ ಲಾಲ್ ನೆಹರು ಅವರ ಜನ್ಮ ದಿನಾಚರಣೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, `ನಿಮ್ಮನ್ನು ನೀವು ಗೆಲ್ಲಬೇಕಾದರೆ ನಿಮ್ಮ ಬುದ್ಧಿವಂತಿಕೆ ಉಪಯೋಗಿಸಿ, ಬೇರೆಯವರನ್ನು ಗೆಲ್ಲಬೇಕಾದರೆ ಹೃದಯವಂತಿಕೆ ಉಪಯೋಗಿಸಿ ಎಂದು ಗಾಂಧಿ ಹೇಳಿದ್ದಾರೆ. ಅದೇ ರೀತಿ ನೀವು ಜನರ ಪ್ರೀತಿ, ವಿಶ್ವಾಸ ಗೆಲ್ಲಬೇಕು. ಕಾಂಗ್ರೆಸ್ ಪಕ್ಷದ ಇತಿಹಾಸ, ಪಕ್ಷದ ಕಾರ್ಯಕ್ರಮ ಎಲ್ಲವನ್ನು ವಿವರಿಸಿ' ಎಂದು ಸಲಹೆ ನೀಡಿದರು.

`ಜನರಿಗೆ ಉಳಲು ಭೂಮಿ, ಪಿಂಚಣಿ ಸೇರಿ ಎಲ್ಲ ಸೌಲಭ್ಯ ನೀಡಿದ್ದೇವೆ. ದೇಶಕ್ಕೆ ಆರ್ಥಿಕ, ಸಾಮಾಜಿಕ ಬದಲಾವಣೆ ಕೊಟ್ಟಿದ್ದು ನಿಮ್ಮ ಕಾಂಗ್ರೆಸ್ ಪಕ್ಷ. ಈ ಪಕ್ಷದ ಸದಸ್ಯತ್ವ ಮಾಡಿಸುವುದೇ ಪುಣ್ಯದ ಕೆಲಸ. ಇಲ್ಲಿ ಹಚ್ಚಿರುವ ಜ್ಯೋತಿ ಸುಭದ್ರವಾಗಿ ಬೆಳಗುತ್ತಿದೆ. ಇದು ರಾಜ್ಯದ ಜ್ಯೋತಿ, ಕಾಂಗ್ರೆಸ್ ಪಕ್ಷದ ಜ್ಯೋತಿ. 2023ರಲ್ಲಿ ನೀವೆಲ್ಲ ಸೇರಿ ವಿಧಾನಸೌಧದಲ್ಲಿ ಕಾಂಗ್ರೆಸ್ ಧ್ವಜ ಹಾರಿಸಲೇಬೇಕು. ಇದು ನಿಮ್ಮ ಸಂಕಲ್ಪ ಆಗಬೇಕು. ನೀವು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಮಾಡಿ. ಪಕ್ಷ ನಿಮ್ಮ ಜತೆ ಇರುತ್ತದೆ. ಸ್ವಾಭಿಮಾನದ ಬದುಕನ್ನು ಕಾಂಗ್ರೆಸ್ ಎಲ್ಲರಿಗೂ ನೀಡುತ್ತದೆ. ಇಂತಹ ಕೆಲಸದಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ' ಎಂದು ಶಿವಕಮಾರ್ ಕರೆ ನೀಡಿದರು.

`ನೀವೆಲ್ಲ ಕಬ್ಬಿಣದಂತೆ. ಕಬ್ಬಿಣದಲ್ಲಿ ಎರಡು ರೀತಿ ಇದೆ. ಕಬ್ಬಿಣದಲ್ಲಿ ಕತ್ತರಿಯನ್ನು ಮಾಡಬಹುದು, ಸೂಜಿಯನ್ನೂ ಮಾಡಬಹುದು. ಬಿಜೆಪಿಯವರು ಈ ದೇಶ ಹಾಗೂ ಸಮಾಜವನ್ನು ತುಂಡರಿಸುವ ಕತ್ತರಿಯಂತೆ ಕೆಲಸ ಮಾಡುತ್ತಿದ್ದಾರೆ. ನಾವು ಕಾಂಗ್ರೆಸಿಗರು ಸೂಜಿಯಂತೆ ಸಮಾಜವನ್ನು ಒಂದು ಮಾಡೋಣ. ಇದೊಂದು ಐತಿಹಾಸಿಕ ದಿನ. ದೇಶ 75ನೆ ಸ್ವಾತಂತ್ರ್ಯ ವರ್ಷಾಚರಣೆ ಮಾಡುತ್ತಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಾರ್ಗದರ್ಶನದಂತೆ ಈ ವರ್ಷ ನೂತನ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿದ್ದೇವೆ' ಎಂದು ಶಿವಕುಮಾರ್ ತಿಳಿಸಿದರು.

`ಕಾಂಗ್ರೆಸ್ ಎನ್ನುವುದೇ ಸಿದ್ಧಾಂತ, ಒಂದು ಆಂದೋಲನ. ಇದೊಂದು ಹೋರಾಟ. ಇದಕ್ಕೆ ದೊಡ್ಡ ಇತಿಹಾಸವಿದೆ. ಈ ಪಕ್ಷದ ಸದಸ್ಯರಾಗುವುದೇ ನಮ್ಮೆಲ್ಲರ ಭಾಗ್ಯ. 100 ವರ್ಷಗಳ ಹಿಂದೆ 1920 ರಲ್ಲಿ ನಾಗ್ಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಸದಸ್ಯತ್ವ ನೋಂದಣಿ ಆರಂಭಿಸಲಾಯಿತು. 25 ಪೈಸೆ ಕೊಟ್ಟು ಸದಸ್ಯತ್ವ ಆರಂಭವಾಯಿತು. ಕೇವಲ ಮೇಲ್ವರ್ಗದವರಿಗೆ ಮಾತ್ರ ಈ ಸದಸ್ಯತ್ವ ನೀಡಲಾಗುತ್ತಿತ್ತು. ಆದರೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ವಿಜಯ್ ರಾಮ್ ಚಾರಿ ಅವರು ಪಕ್ಷದ ಅಧ್ಯಕ್ಷರಾದಾಗ ಎಲ್ಲರಿಗೂ ಸದಸ್ಯತ್ವ ನೀಡುವ ಬದಲಾವಣೆ ತಂದರು ಎಂದು ಅವರು ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News