ಧಾರಾಕಾರ ಮಳೆ: ಕಾಫಿನಾಡಿನಲ್ಲಿ ಹೊಳೆಯಂತಾದ ರಸ್ತೆಗಳು
ಚಿಕ್ಕಮಗಳೂರು, ನ.14: ಜಿಲ್ಲೆಯಲ್ಲಿ ಅಕಾಲಿಕ ಮಳೆಯ ಆರ್ಭಟದಿಂದಾಗಿ ಕಾಫಿ, ಅಡಿಕೆ ಬೆಳೆಗಾರರ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದ್ದು, ಅಕಾಲಿಕ ಮಳೆಯ ಕಾಟದಿಂದ ಈಗಾಗಲೇ ರೋಸಿ ಹೋಗಿರುವ ಬೆಳೆಗಾರರು ಸದ್ಯ ಕಾಫಿ, ಅಡಿಕೆ ಬೆಳೆ ಕಟಾವು ಮಾಡಲಾಗದೇ ಪರಿತಪಿಸುತ್ತಿದ್ದರೇ, ಮತ್ತೊಂದೆಡೆ ಕಟಾವು ಮಾಡಿದ ಬೆಳೆಗಳನ್ನು ಸಂಸ್ಕರಣೆ ಮಾಡಲಾಗದೇ ಪ್ರತಿದಿನ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಹವಾಮಾನ ವೈಫರೀತ್ಯದಿಂದಾಗಿ ಜಿಲ್ಲಾದ್ಯಂತ ಕಳೆದ ಕೆಲ ದಿನಗಳಿಂದ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದ್ದು, ರವಿವಾರ ಮಧ್ಯಾಹ್ನದ ಬಳಿಕ ಜಿಲ್ಲೆಯ ಮಲೆನಾಡು ಹಾಗೂ ಬಯಲ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಜಿಲ್ಲೆಯ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ರವಿವಾರ ಬೆಳಗ್ಗೆ ಸಾಧಾರಣವಾಗಿ ಮಳೆಯಾಗಿದ್ದು, ಮಧ್ಯಾಹ್ನವಾಗುತ್ತಿದ್ದಂತೆ ದಿಢೀರ್ ಸುರಿದ ಭಾರೀ ಮಳೆಗೆ ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತು. ಮಧ್ಯಾಹ್ನ ಆರಂಭವಾದ ಮಳೆ ಸಂಜೆಯಾದರೂ ಎಡಬಿಡದೇ ಸುರಿದ ಪರಿಣಾಮ ಮಲೆನಾಡು ಭಾಗದ ರಸ್ತೆಗಳ ಮೇಲೆಯೇ ಮಳೆ ನೀರು ಹರಿದ ಪರಿಣಾಮ ರಸ್ತೆಗಳು ಹಳ್ಳಗಳಂತೆ ಭಾಸವಾಗಿದ್ದವು.
ಜಿಲ್ಲೆಯ ಕಳಸ, ಕುದುರೆಮುಖ, ಬಾಳೆಹೊಳೆ, ಕಗ್ಗನಳ್ಳ, ಸಂಸೆ, ಹೊರನಾಡು ಭಾಗದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಭದ್ರಾ ನದಿಯಲ್ಲಿ ನೀರಿನ ಹರಿವು ಒಂದೇ ದಿನಕ್ಕೆ ಹೆಚ್ಚಾಗಿದೆ. ಧಾರಾಕಾರ ಮಳೆಯಿಂದಾಗಿ ಕಾಫಿ, ಅಡಿಕೆ ತೋಟಗಳಲ್ಲಿ ಕೃತಕ ಝರಿ, ಜಲಪಾತಗಳು ಸೃಷ್ಟಿಯಾಗಿದ್ದು, ಮಳೆ ನೀರು ಕಾಫಿ, ಅಡಿಕೆ ತೋಟಗಳಲ್ಲಿ ನಿಂತ ಪರಿಣಾಮ ಅತೀಶೀತಕ್ಕೆ ತುತ್ತಾಗಿ ತೋಟಗಳೇ ನಾಶವಾಗುವ ಭೀತಿ ಬೆಳೆಗಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಿರಂತರ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ರಸ್ತೆ ಬದಿಯಲ್ಲಿದ್ದ ಮರಗಳು ಉರುಳಿ ಬಿದ್ದಿದ್ದು, ಕೆಲವೆಡೆ ವಿದ್ಯುತ್ ಕಂಬಗಳೂ ನೆಲಕಚ್ಚಿವೆ. ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದ್ದು, ಕುಗ್ರಾಮಗಳ ಜನರು ಕತ್ತಲೆಯಲ್ಲಿ ದಿನಕಳೆಯುವಂತಾಗಿದೆ. ಧಾರಾಕಾರ ಮಳೆಯಿಂದಾಗಿ ಮಲೆನಾಡು ಭಾಗದ ರಸ್ತೆಗಳ ಮೇಲೆಯೇ ಮಳೆ ನೀರು ಹಿರಯುತ್ತಿರುವುದರಿಂದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ಇನ್ನು ರವಿವಾರ ಚಿಕ್ಕಮಗಳೂರು ತಾಲೂಕು ಸೇರಿದಂತೆ ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಬಯಲು ಭಾಗದಲ್ಲಿ ಸಾವಿರಾರು ಹೆಕ್ಟೆರ್ ಪ್ರದೇಶದಲ್ಲಿ ಬೆಳೆದಿರುವ ತರಕಾರಿ ಬೆಳೆಗಳೂ ನಾಶವಾಗುವ ಭೀತಿ ರೈತರದ್ದಾಗಿದೆ.
ಸದ್ಯ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಫಿ, ಅಡಿಕೆ ಕಟಾವು, ಸಂಸ್ಕರಣೆಯಂತಹ ಕೃಷಿ ಚಟುವಟಿಕೆ ನಡೆಯುತ್ತಿದ್ದು, ಅಕಾಲಿಕ ಮಳೆ ಕಾಫಿ, ಅಡಿಕೆ ಕಟಾವು, ಸಂಸ್ಕರಣೆಗೆ ಭಾರೀ ಅಡಚಣೆ ಉಂಟು ಮಾಡಿದೆ. ಮಳೆಯಿಂದ ಕಾಫಿ, ಅಡಿಕೆ ಕಟಾವು ಕೆಲಸ ಮಾಡಲು ಸಾಧ್ಯವಾಗದಿರುವುದು ಒಂದೆಡೆಯಾದರೇ ಈಗಾಗಲೇ ಕಟಾವು ಮಾಡಿರುವ ಕಾಫಿ, ಅಡಿಕೆ ಬೆಳೆಗಳನ್ನು ಸಂಸ್ಕರಣೆ ಮಾಡಲೂ ಸಾಧ್ಯವಾಗದೇ ಬೆಳೆ ಕಣಗಳಲ್ಲಿ ಕೊಳೆಯಲಾರಂಭಿಸಿರುವುದರಿಂದ ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗಿದೆ. ಕಾಫಿ, ಅಡಿಕೆ ಸಂಸ್ಕರಣೆಗೆ ಬಿಸಿಲು ಅತ್ಯಗತ್ಯವಾಗಿದ್ದು, ಕಳೆದೊಂದು ತಿಂಗಳಿನಿಂದ ಬಿಸಿಲಿನ ವಾತಾವರಣ ಮಾಯಾವಾಗಿರುವುದರಿಂದ ಬೆಳೆ ಸಂರಕ್ಷಣೆ ಮಾಡಲು ಬೆಳೆಗಾರರ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನ ಕೆಲ ಭಾಗದಲ್ಲಿ ಕಾಫಿಯನ್ನು ಬೆಂಕಿ ಹಾಕಿ ಶಾಖ ನೀಡಲು ರೈತರು ಪರದಾಡುತ್ತಿರುವ ದೃಶ್ಯಗಳು ಸಣ್ಣ ರೈತರ ಧಯನೀಯ ಸ್ಥಿತಿಗೆ ಸಾಕ್ಷಿ ಹೇಳುತ್ತಿವೆ.