ಭೂಮಿ ಹಾಗೂ ಜನತೆಗೆ ಎಸಗಿರುವ ವಿಶ್ವಾಸದ್ರೋಹ: ಸಿಒಪಿ 26 ಸಮ್ಮೇಳನದ ನಿರ್ಣಯದ ಬಗ್ಗೆ ವ್ಯಾಪಕ ಅತೃಪ್ತಿ

Update: 2021-11-14 18:29 GMT

ಲಂಡನ್, ನ.14: ಸ್ಕಾಟ್ಲ್ಯಾಂಡ್ನ ಗ್ಲಾಸ್ಗೋದಲ್ಲಿ ನಡೆದ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಅಂಗೀಕರಿಸಲಾದ ಒಪ್ಪಂದವು ‘ಪ್ರಮುಖ ಹೆಜ್ಜೆಯಾಗಿರುವ ಜತೆಗೇ, ರಾಜಿ ಮಾತುಕತೆ’ಯಾಗಿದೆ ಎಂದು ವಿಶ್ವಸಂಸ್ಥೆ ಬಣ್ಣಿಸಿದೆ. ಆದರೆ ಈ ಒಪ್ಪಂದವು ನಮ್ಮ ಭೂಮಿ ಹಾಗೂ ಅದರ ಜನತೆಗೆ ಎಸಗಿರುವ ವಿಶ್ವಾಸದ್ರೋಹವಾಗಿದೆ ಎಂದು ಹವಾಮಾನ ಮತ್ತು ಪರಿಸರ ಕಾರ್ಯಕರ್ತರು ಟೀಕಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಬದಲಾವಣೆ ಮಾಡಲಾದ ಒಪ್ಪಂದಕ್ಕೆ ಶನಿವಾರ ಸುಮಾರು 200 ದೇಶಗಳ ಅನುಮೋದನೆ ದೊರಕಿದೆ. ‌

ಈ ಒಪ್ಪಂದವು ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಶಿಯಸ್ಗೆ ಮಿತಿಗೊಳಿಸುವ ಆಶಯವನ್ನು ಜೀವಂತವಾಗಿರಿಸಿದ್ದರೂ, ಅಂತಿಮ ಕ್ಷಣದಲ್ಲಿ ಮಾಡಲಾದ ಬದಲಾವಣೆಯಲ್ಲಿ ಕಲ್ಲಿದ್ದಲ ಬಳಕೆ ಬಗ್ಗೆ ಮೃದು ಭಾಷೆಯನ್ನು ಅಂಗೀಕರಿಸಲಾಗಿದೆ ಎಂದು ಹಲವರು ಅಸಮಾಧಾನ ಸೂಚಿಸಿದ್ದಾರೆ. ಭಾರತ ಪ್ರಸ್ತಾವಿಸಿದ ಮತ್ತು ಚೀನಾ ಬೆಂಬಲಿಸಿದ ಪರಿಷ್ಕತ ನಿರ್ಣಯದಲ್ಲಿ ‘ಕಲ್ಲಿದ್ದಲು ಬಳಕೆಯನ್ನು ರದ್ದುಗೊಳಿಸುವ’ ಪದದ ಸ್ಥಾನದಲ್ಲಿ ‘ಹಂತ ಹಂತವಾಗಿ ರದ್ದುಗೊಳಿಸುವ’ ವಾಕ್ಯವನ್ನು ಸೇರಿಸಲಾಗಿದೆ. ಅಲ್ಲದೆ, ಶ್ರೀಮಂತ ದೇಶಗಳು ಭರವಸೆ ನೀಡಿರುವ ಆರ್ಥಿಕ ಬೆಂಬಲದ ಬಗ್ಗೆ ಕಡಿಮೆ ಆದಾಯದ ದೇಶಗಳಿಗೆ ಇರುವ ಆತಂಕದ ಬಗ್ಗೆ ನಿರ್ಣಯದಲ್ಲಿ ಪ್ರಸ್ತಾವಿಸಲಾಗಿಲ್ಲ. 

ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ನ ವಿರೋಧದ ಹಿನ್ನೆಲೆಯಲ್ಲಿ, ಹವಾಮಾನ ಬದಲಾವಣೆಯಿಂದ ಆಗಿರುವ ನಾಶ ಮತ್ತು ನಷ್ಟಕ್ಕೆ ಪರಿಹಾರ ರೂಪದಲ್ಲಿ ನೀಡುವ ನಿರ್ಧಿಷ್ಟ ಆರ್ಥಿಕ ನೆರವಿನ ಬಗ್ಗೆ ಯಾವುದೇ ಪ್ರಸ್ತಾವನೆ ಮಾಡದೆ, ‘ಈ ವಿಷಯದಲ್ಲಿ ಮುಂದಿನ ದಿನದಲ್ಲಿ ಮಾತುಕತೆ ನಡೆಸುವ’ ಆಶ್ವಾಸನೆಯನ್ನು ಮಾತ್ರ ನೀಡಲಾಗಿದೆ. ‘ಅಂಗೀಕರಿಸಲಾದ ನಿರ್ಣಯ ರಾಜಿ ಹೊಂದಾಣಿಕೆಯಾಗಿದೆ. ಹಾಲಿ ಜಗತ್ತಿನ ಹಿತಾಸಕ್ತಿ, ಪರಿಸ್ಥಿತಿ, ವೈರುದ್ಯಗಳು, ರಾಜಕೀಯ ಇಚ್ಛಾಶಕ್ತಿಯ ಸ್ಥಿತಿಗತಿಯನ್ನು ಇದು ಬಿಂಬಿಸುತ್ತದೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರ್ರಸ್ ಹೇಳಿದ್ದಾರೆ. ಈ ಒಪ್ಪಂದ ಕೆಲವು ಪ್ರಮುಖ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಸ್ತಾವಿಸಿದ್ದರೂ ಇದು ಸಾಕಾಗದು. ತುರ್ತು ಕ್ರಮ ಕೈಗೊಳ್ಳಬೇಕಾದ ಕಾಲ ಇದಾಗಿದೆ ಎಂದವರು ಹೇಳಿದ್ದಾರೆ. ಅಮೆರಿಕದ ಪ್ರತಿನಿಧಿ ಜಾನ್ ಕೆರಿ ಮತ್ತು ಚೀನಾದ ಪ್ರತಿನಿಧಿ ಝಾವೊ ಯಿಂಗ್ವಿುನ್ ಈ ಒಪ್ಪಂದವನ್ನು ಸ್ವಾಗತಿಸಿದ್ದು, ಕೆಲವೊಮ್ಮೆ ಉತ್ತಮ ಹೊಂದಾಣಿಕೆಯ ಬಗ್ಗೆ ಎಲ್ಲರಲ್ಲೂ ತುಸು ಅಸಮಾಧಾನ ಇರುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News