ತುಮಕೂರು: ಭದ್ರತಾ ಸಿಬ್ಬಂದಿ ಹತ್ಯೆ ನಡೆಸಿ ಬ್ಯಾಂಕ್‌ ನಿಂದ ದರೋಡೆ

Update: 2021-11-15 08:52 GMT

ತುಮಕೂರು: ಬ್ಯಾಂಕ್‌ವೊಂದರ ಭದ್ರತಾ ಸಿಬ್ಬಂದಿ ಕೊಲೆಗೈದು ಒಳನುಗ್ಗಿರುವ ದರೋಡೆಕೋರರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ನಾಗವಲ್ಲಿಯಲ್ಲಿ ಕಳೆದ ರಾತ್ರಿ ನಡೆದಿದೆ.

ತಾಲೂಕಿನ ನಾಗವಲ್ಲಿ ಇರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯಲ್ಲಿ ಈ ಕಳ್ಳತನ ನಡೆದಿದ್ದು,  ಬ್ಯಾಂಕ್ ಭದ್ರತಾ ಸಿಬ್ಬಂದಿ ಸಿದ್ದಪ್ಪ (55) ಎಂಬುವರೇ ಕೊಲೆಯಾಗಿರುವ ದುರ್ದೈವಿ.

ನಾಗವಲ್ಲಿ ಡಿಸಿಸಿ ಬ್ಯಾಂಕ್‌ಗೆ ಕಳೆದ ರಾತ್ರಿ ದರೋಡೆಕೋರರು ನುಗ್ಗಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದ ಸಿದ್ದಪ್ಪ ಅವರು ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಕಳ್ಳರ ತಂಡ ಅವರ ಕೈಕಾಲು ತಿರುಚಿ ಕೊಲೆಗೈದು ಶವವನ್ನು ಶೌಚಾಲಯಕ್ಕೆ ಎಸೆದಿದ್ದಾರೆ ಎನ್ನಲಾಗಿದೆ. ಬಳಿಕ ಬ್ಯಾಂಕ್ ಕಟ್ಟಡದ ಷೆಟರ್ಒ ಒಡೆದು ಒಳಗೆ ನುಗ್ಗಿ ಬ್ಯಾಂಕ್‌ನಲ್ಲಿದ್ದ ಕಡತಗಳು, ಇತರ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ. ತದ ನಂತರ ಬ್ಯಾಂಕ್ ಒಳಗಿದ್ದ ಲಾಕರ್‌ಗಳನ್ನು ಒಡೆದು ಅದರೊಳಗಿದ್ದ ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ, ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಬ್ಯಾಂಕ್‌ನಲ್ಲಿ ಎಷ್ಟು ಪ್ರಮಾಣದ ಚಿನ್ನಾಭರಣಗಳು ಕಳುವಾಗಿವೆ ಎಂಬುದರ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ ಬಳಿಕವೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಬ್ಯಾಂಕ್ ರಜೆ ಇತ್ತು. ಇಂದು ಬೆಳಿಗ್ಗೆ ಬ್ಯಾಂಕ್ ನೌಕರರು ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದ ಸಂದರ್ಭದಲ್ಲಿ ಈ ಕಳ್ಳತನ, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.ಕಳೆದ 13 ವರ್ಷಗಳ ಹಿಂದೆ ಇದೇ ನಾಗವಲ್ಲಿ ಡಿಸಿಸಿ ಬ್ಯಾಂಕ್‌ನ ಗೋಡೆ ಕೊರೆದು ಕಳ್ಳತನ ಮಾಡಲಾಗಿತ್ತು. ಆ ಸಂದರ್ಭದಲ್ಲೂ ಸಹ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿದ್ದವು.ಘಟನೆಯ ಸುದ್ದಿ ತಿಳಿದ ಕೂಡಲೇ ಹೆಬ್ಬೂರು ಪಿಎಸ್ಐ ದೇವಿಕಾರಾಣಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ್ ಭೇಟಿ ನೀಡಿ ಪರಿಶೀಲಿಸಿ, ಈ ದರೋಡೆ ಪ್ರಕರಣವನ್ನು ಬೇಧಿಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ. 

ಘಟನೆ ನಡೆದ ಸ್ಥಳಕ್ಕೆ ಶ್ವಾನದಳ ಮತ್ತು ಬೆಳರಚ್ಚು ತಜ್ಞರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ನಾಗವಲ್ಲಿಯಲ್ಲಿ ಬ್ಯಾಂಕ್ ಭದ್ರತಾ ಸಿಬ್ಬಂದಿಯನ್ನು ಕೊಲೆಗೈದು ದರೋಡೆ ಮಾಡಿರುವ ಪ್ರಕರಣ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾತ್ರಿ ಗಸ್ತು ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಹೆಚ್ಚಿಸಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News