ಬಿಜೆಪಿ ಸರಕಾರ ಕಾರ್ಪೊರೆಟ್ ಸ್ನೇಹಿ, ಬಡವರ ವಿರೋಧಿ ಸರಕಾರ: ಸಾತಿ ಸುಂದರೇಶ್

Update: 2021-11-15 12:58 GMT

ಚಿಕ್ಕಮಗಳೂರು, ನ.15: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ಬಂದಾಗಿನಿಂದ ಜನವಿರೋಧಿ, ಜೀವವಿರೋಧಿ ನೀತಿಗಳನ್ನು ಜಾರಿ ಮಾಡುತ್ತಾ ಕಾರ್ಪೊರೆಟ್ ಕಂಪೆನಿಗಳ ಪರವಾಗಿ ಆಡಳಿತ ನಡೆಸುತ್ತಿದೆ. ಇಂತಹ ಸರಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಸಿಪಿಐ ಪಕ್ಷ ರಾಜ್ಯಾದ್ಯಂತ ಜನಜಾಗೃತಿ ಕಾರ್ಯಕ್ರಮಗಳೊಂದಿಗೆ ಚಳವಳಿಯನ್ನೂ ನಡೆಸಲು ತೀರ್ಮಾನಿಸಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರಕಾರದ ಆಡಳಿತದಿಂದಾಗಿ ದೇಶದಲ್ಲಿ ಹಸಿವಿನ ಸೂಚ್ಯಾಂಕ ಹೆಚ್ಚಿದ್ದು, ಬಡವರು ಕಡುಬಡವರಾಗಿದ್ದಾರೆ. ಶ್ರೀಮಂತರು ಅಗರ್ಭ ಶ್ರೀಮಂತರಾಗಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ದೇಶದ ಜನರ ಆದಾಯ ಕುಸಿದಿದ್ದರೇ ಅಂಬಾನಿ ಅದಾನಿಗಳ ಸಂಪತ್ತು ದುಪ್ಪಟ್ಟಾಗಿದೆ. ಇದು ಮೋದಿ ಸರಕಾರದ ಬಡವರು, ಕಾರ್ಮಿಕರು, ರೈತ ವಿರೋಧಿ ಆಡಳಿತ ಹಾಗೂ ಕಾರ್ಪೊರೆಟ್ ಸ್ನೇಹಿ ನಿಲುವಿಗೆ ಸಾಕ್ಷಿಯಾಗಿದೆ. ಇಂತಹ ಸರಕಾರವನ್ನು ಕಿತ್ತೊಗೆಯಲು ಸಿಪಿಐ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆ ನಿರ್ಣಯಕೈಗೊಂಡಿದ್ದು, ಈ ನಿರ್ಣಯದಂತೆ ರಾಜ್ಯದಲ್ಲಿ ಸಿಪಿಐ ಪಕ್ಷ ಬಿಜೆಪಿ ಸರಕಾರದ ವಿರುದ್ಧ ಜನಾಂದೋಲ ಹಮ್ಮಿಕೊಳ್ಳಲಿದೆ ಎಂದರು.

ಮೋದಿ ಸರಕಾರ ಸಂಪೂರ್ಣವಾಗಿ ಕಾರ್ಪೊರೆಟ್ ಸ್ನೇಹಿಯಾಗಿದ್ದು, ಈ ಕಾರಣಕ್ಕೆ ದೇಶದ ಸರಕಾರಿ ಸ್ವಾಮ್ಯದ ಎಲ್ಲ ಸಂಸ್ಥೆಗಳನ್ನು ಅಂಬಾನಿ ಅದಾನಿಗಳಿಗೆ ಮಾರಾಟ ಮಾಡುತ್ತಿದೆ. ಈ ಮೂಲಕ ದುಡಿಯುವ ವರ್ಗದ ಹಿತವನ್ನು ಕಡೆಗಣಿಸಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‍ಟಿ, ನೋಟು ಅಮಾನ್ಯೀಕರಣ ಮೊದಲಾದ ಬಿಜೆಪಿ ಸರಕಾರದ ಆರ್ಥಿಕ ನೀತಿಗಳು ಕಾರ್ಪೊರೆಟ್ ಕಂಪೆನಿಗಳ ಹಿತಾಸಕ್ತಿ ಕಾಯುವುದೇ ಆಗಿದೆ ಎಂದ ಅವರು, ಮೋದಿ ಸರಕಾರದ ಆಡಳಿತದಿಂದಾಗಿ ದೇಶಾದ್ಯಂತ ನಿರುದ್ಯೋಗ ಹೆಚ್ಚಾಗಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪರಿಣಾಮ ಸಮಾನ್ಯ ಜನರ ಬದುಕು ಕಷ್ಟವಾಗಿದೆ. ರೈತರು, ಕಾರ್ಮಿಕರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದರೇ ಇವುಗಳು ಸಮಸ್ಯೆಗಳೇ ಅಲ್ಲ ಎಂಬಂತೆ ಮೋದಿ ಸರಕಾರ ಪ್ರತಿಕ್ರಿಯಿಸುತ್ತಿದೆ ಎಂದು ಅವರು ಟೀಕಿಸಿದರು.

ಕೃಷಿ ತಿದ್ದುಪಡಿ ಮಸೂದೆಗಳು ದೇಶದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಮಾರಕವಾಗಿದ್ದು, ಈ ಮಸೂದೆಗಳ ರದ್ದತಿಗೆ ಆಗ್ರಹಿಸಿ ದಿಲ್ಲಿಯಲ್ಲಿ ರೈತರು ಕಳೆದೊಂದು ವರ್ಷದಿಂದ ಧರಣಿ ಮಾಡುತ್ತಿದ್ದಾರೆ. ಆದರೆ ಮೋದಿ ಸರಕಾರ ರೈತರ ಹೋರಾಟಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವ ಮೋದಿ ಸರಕಾರ ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ. ಕೇಂದ್ರ ಸರಕಾರದ ಈ ನಡೆ ಸಂವಿಧಾನವನ್ನು ದುರ್ಬಲಗೊಳಿಸುವ ಮತ್ತು ಸರ್ವಾಧಿಕಾರಿ ದೋರಣೆಯಾಗಿದೆ. ಇದನ್ನು ವಿರೋಧಿಸಿ ಹೋರಾಟವನ್ನು ತೀವ್ರಗೊಳಿಸಲು ಪಕ್ಷದ ರಾಷ್ಟ್ರೀಯ ಮಂಡಳಿ ನಿರ್ಣಯಿಸಿದೆ ಎಂದರು.

ಮುಂಬರುವ ಚುನಾವಣೆಯಲ್ಲಿ ಸಿಪಿಐ ಪಕ್ಷ ರಾಜ್ಯದ 12 ಜಿಲ್ಲೆಗಳ 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈ ಸಂಬಂಧ ಈಗಿನಿಂದಲೇ ತಯಾರಿ ನಡೆಸಲು ಪಕ್ಷದ ರಾಜ್ಯ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ ಹಾಗೂ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷ ಚುನಾವಣೆ ಎದುರಿಸಲಿದೆ ಎಂದರು.

ಬಿಜೆಪಿ ಸರಕಾರ ಕೊರೋನಾ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಸಾತಿ ಸುಂದರೇಶ್, ಲಸಿಕೆ ಪಡೆಯದವರಿಗೆ ಸರಕಾರಿ ಸೌಲಭ್ಯಗಳನ್ನು ನಿಲ್ಲಿಸಲಾಗುವುದು ಎಂದು ಬಿಜೆಪಿಯವರು ಜನರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಬಿಜೆಪಿಯವರ ಈ ನೀತಿ ಲಸಿಕಾ ಭಯೋತ್ಪಾದನೆಯಾಗಿದ್ದು, ಲಸಿಕೆ ಪಡೆಯದವರ ಮನವೊಲಿಸಿ ಲಸಿಕೆ ನೀಡಬೇಕೇ ಹೊರತು ಸೌಲಭ್ಯಗಳನ್ನು ನಿಲ್ಲಿಸುವ ಬೆದರಿಕೆ ಹಾಕುವುದನ್ನು ಖಂಡಿಸುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಕಾಫಿ, ಅಡಿಕೆ ಸೇರಿದಂತೆ ಕೃಷಿ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿದೆ. ವಿಶೇಷವಾಗಿ ಅತಿವೃಷ್ಟಿಯಿಂದ ಕಾಫಿ ಉದ್ಯಮವೇ ನಾಶವಾಗುವ ಭೀತಿ ಎದುರಾಗಿದ್ದು, ಇದರಿಂದ ಸಣ್ಣ ಬೆಳೆಗಾರರು ಹಾಗೂ ಉದ್ಯಮವನ್ನು ಆಶ್ರಯಿಸಿರು ಲಕ್ಷಾಂತರ ಕಾರ್ಮಿಕರ ಬದುಕು ಬೀದಿ ಪಾಲಾಗಲಿದೆ. ಆದ್ದರಿಂದ ಸರಕಾರಗಳು ಕೂಡಲೇ ವಿಶೇಷ ಪ್ಯಾಕೆಜ್ ಬಿಡುಗಡೆ ಮಾಡುವ ಮೂಲಕ ಕಾಫಿ ಉದ್ಯಮವನ್ನು ಉಳಿಸಬೇಕು, ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂದರು.

ಸಿಪಿಐ ರಾಜ್ಯ ಮಂಡಳಿ ಸದಸ್ಯ ಜನಾರ್ಧನ್ ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶಾದ್ಯಂತ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಜಾತೀಯತೆಯನ್ನು ಪೋಷಿಸಲಾಗುತ್ತಿದೆ. ದೇಶದಲ್ಲಿ ಈ ಹಿಂದೆ ಇದ್ದ ಸೌಹಾರ್ದ ವಾತಾವರಣವನ್ನು ಹಾಳು ಮಾಡಿ ಧರ್ಮ ಧರ್ಮಗಳ ನಡುವಿನ ಸಾಮರಸ್ಯವನ್ನು ಹಾಳು ಮಾಡಿ ದೇಶದ ಐಕ್ಯತೆಯನ್ನೇ ಒಡೆದು ಹಾಕಲಾಗುತ್ತಿದೆ. ಸಿಪಿಐ ಪಕ್ಷ ಬಿಜೆಪಿಯವರ ಈ ಒಡೆದಾಳುವ ನೀತಿಗಳ ವಿರುದ್ಧ ಜನಜಾಗೃತಿ ನಡೆಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ, ಮುಖಂಡರಾದ ಬಿ.ಅಮ್ಜದ್, ವಿಜಯ್‍ಕುಮಾರ್, ಕೆಳಗೂರು ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News