ಮೈಸೂರು: ಕೊರೋನ ಲಸಿಕೆ ಪಡೆದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು; ಆರೋಪ

Update: 2021-11-15 13:30 GMT

ಮೈಸೂರು, ನ.15: ಕೊರೋನ ಲಸಿಕೆ ಪಡೆದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದ್ದು, ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕೆ.ಆರ್.ಆಸ್ಪತ್ರೆ ಶವಾಗಾರದ ಎದುರು ಮೃತದೇಹವಿಟ್ಟು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಕುಟುಂಬಸ್ಥರು, ದಲಿತ ಸಂಘರ್ಷ ಸಮಿತಿ ಮತ್ತು ಅಶೋಕಪುರಂ ನಿವಾಸಿಗಳು ಸೋಮವಾರ ಧರಣಿ ನಡೆಸಿದರು.

ನಗರದ ಅಶೋಕಪುರಂ ನಿವಾಸಿ ಸುರೇಶ್ (39) ಕೊರೋನ ಲಸಿಕೆ ಪಡೆದು ಮೃತಪಟ್ಟ ವ್ಯಕ್ತಿ. ಕೊರೋನ ಲಸಿಕೆಯಿಂದ ಮೃತಪಟ್ಟಿರುವುದನ್ನು ಖಂಡಿಸಿ ಮತ್ತು ಕಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.

 ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಧರಣಿನಿರತರೊಂದಿಗೆ ಮಾತುಕತೆ ನಡೆಸಿ ಸೂಕ್ತ ಭರವಸೆ ನೀಡಿದ ಬಳಿಕ ಧರಣಿಯನ್ನು ಹಿಂಪಡೆದು ಅಂತ್ಯಕ್ರಿಯೆಗೆ ಕೊಂಡೊಯ್ದರು.

ಮೃತನ ತಾಯಿ ಮಹದೇವಮ್ಮ ಮಾತನಾಡಿ, ನನ್ನ ಮಗ ಬಹಳ ಆರೋಗ್ಯವಾಗಿದ್ದ. ಲಸಿಕೆ ನೀಡಿದ ಕೂಡಲೇ ಅಸ್ವಸ್ಥಗೊಂಡ. ಮತ್ತೊಂದು ಇಂಜಕ್ಷನ್ ನೀಡಿದ ಬಳಿಕ ವಾಂತಿ ಮಾಡಿಕೊಂಡ ಎಂದು ಅಳಲು ತೋಡಿಕೊಂಡರು.

ಧರಣಿಯಲ್ಲಿ ಮಾಜಿ ಮೇಯರ್ ಪುತುಷೋತ್ತಮ್, ಮಾಜಿ ಉಪಮೇಯರ್ ವಿ.ಶೈಲೇಂದ್ರ, ನಗರಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಗುಣಶೇಖರ್ , ಜೋಗಿ ಮಂಜು, ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕೊರೋನ ಲಸಿಕೆಯಿಂದ ಮೃತಪಟ್ಟಿದ್ದಾರೊ ಅಥವಾ ಬೇರೆ ಯಾವುದಾದರೂ ಸಮಸ್ಯೆ ಇತ್ತೊ ಎಂದು ಪರೀಕ್ಷಿಸಲಾಗುತ್ತಿದೆ. ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಒಳ್ಳೆಯ ವೈದ್ಯರು ಚಿಕಿತ್ಸೆ ನೀಡಿದರೂ ಮೃತಪಟ್ಟಿರುವುದು ನೋವು ತಂದಿದೆ. ಮೃತ ಸುರೇಶ್ ಅವರಿಗೆ ನೀಡಿರುವ ಲಸಿಕೆಯನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದೇನೆ.

ಡಾ.ಬಗಾದು ಗೌತಮ್, ಜಿಲ್ಲಾಧಿಕಾರಿ 

ಸುರೇಶ್ ಸಾವಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಬೇಜವಾಬ್ದಾರಿತನವೇ ಕಾರಣ. ಇದರ ನೈತಿಕ ಹೊಣೆಯನ್ನು ಜಿಲ್ಲಾಡಳಿತವೇ ಹೊರಬೇಕು ಮತ್ತು ಕಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು.

 -ಎಂ.ಕೆ.ಸೋಮಶೇಖರ್, ಮಾಜಿ ಶಾಸಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News