×
Ad

ಬಿಟ್ ಕಾಯಿನ್ ಪ್ರಕರಣ: ಸಂಸತ್‍ನಲ್ಲಿ ಚರ್ಚೆ ಆಗಬೇಕು; ಸಂಸದ ಡಿ.ಕೆ.ಸುರೇಶ್

Update: 2021-11-15 21:28 IST

ಬೆಂಗಳೂರು, ನ. 15: ‘ಕ್ರಿಪ್ಟೋ ಕರೆನ್ಸಿ ಬಗ್ಗೆ ದೇಶದ ಯುವಕರು ಆಸಕ್ತಿಯಿಂದ ತಿಳಿದುಕೊಳ್ಳುತ್ತಿದ್ದಾರೆ. ಬಿಟ್ ಕಾಯಿನ್ ಹಗರಣ ದೇಶದ ಗಮನ ಸೆಳೆದಿದ್ದು, ಈ ಕುರಿತು ಸಮಗ್ರ ತನಿಖೆ ಆಗಬೇಕು. ಅಲ್ಲದೆ, ಈ ಸಂಬಂಧ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಚರ್ಚೆಯಾಗಬೇಕು' ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಮತ್ತು ರಾಜ್ಯ ಸರಕಾರ ಬಿಟ್ ಕಾಯಿನ್ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಿವೆ. ಏಕೆಂದರೆ ಬಿಟ್ ಕಾಯಿನ್ ಹಗರಣದ ಫಲಾನುಭವಿಗಳು ಅವರೇ ಆಗಿದ್ದಾರೆ. ರಾಜ್ಯ ಸರಕಾರದಲ್ಲಿ ಇದರ ಫಲಾನುಭವಿಗಳು ಇದ್ದಾರೆ' ಎಂದು ಗಂಭೀರ ಆರೋಪ ಮಾಡಿದರು.

‘ಕಾಂಗ್ರೆಸ್ ಬಿಟ್ ಕಾಯಿನ್ ಖಾಲಿ ಡಬ್ಬಿ ವಿಚಾರ ಎಂದು ಆರೋಪಿಸಲಾಗುತ್ತಿದೆ. ಆದರೆ, ಬುಟ್ಟಿ ಇದೆ ಅಂದ ಮೇಲೆ ಹಾವು ಎಲ್ಲಿ ಹೊಯ್ತು ಎಂದು ಹೇಳಬೇಕು. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಪ್ರಧಾನಿ ಮೋದಿ ಇದರ ಬಗ್ಗೆ ಮಾತನಾಡಿಲ್ಲ. ಆದರೆ, ಇದು ದೇಶದ ಆರ್ಥಿಕ ತೆರಿಗೆ ವಿಚಾರ. ಈ ಕುರಿತು ಕೇಂದ್ರದ ನಾಯಕರು ಮಾತನಾಡಬೇಕಿದೆ ಎಂದು ಸುರೇಶ್ ಆಗ್ರಹಿಸಿದರು.

ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರ್ರೀಕಿಯನ್ನು ಬಂಧನ ಮಾಡಿದ್ದು ಬಿಜೆಪಿ ಸರಕಾರ. ಆದರೆ, ಅವರನ್ನು ಬಿಟ್ಟು ಕಳುಹಿಸಿದ್ದು ಇದೇ ಬಿಜೆಪಿ ಸರಕಾರ. ಪೆÇಲೀಸ್‍ನವರೇ ಶ್ರೀಕಿ ಬಂಧಿಸಿ, 11 ಕೋಟಿ ರೂ.ಮೌಲ್ಯದ ಬಿಟ್ ಕಾಯಿನ್ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿದ್ದರು. ಬುಟ್ಟಿಯಲ್ಲಿ ಹಾವಿಲ್ಲದೆ ಪೆÇಲೀಸ್ ಇಲಾಖೆ ಶ್ರೀಕಿಯನ್ನು ಬಂಧಿಸಿದ್ದರೇ? ಎಂದು ಡಿ.ಕೆ.ಸುರೇಶ್ ಪ್ರಶ್ನಿಸಿದರು.

‘ಬಿಟ್ ಕಾಯಿನ್ ಹ್ಯಾಕ್ ಆಗಿರುವ ಬಗ್ಗೆ ಕೋರ್ಟ್ ಮಾಹಿತಿಯನ್ನ ಪೊಲೀಸರು ಕೊಟ್ಟಿಲ್ಲವೇ? ಯಾರ್ಯಾರ ಕೈವಾಡವಿದೆ ಎನ್ನುವುದು ಬಿಜೆಪಿಯವರು ಹೇಳಬೇಕು. ಪೊಲೀಸರು ಸುಳ್ಳು ಹೇಳಿದ್ದಾರಾ ಅಥವಾ ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆಂಬುದು ಗೊತ್ತಾಗಬೇಕಿದೆ. ಅಡ್ವೊಕೇಟ್ ಜನರಲ್ ಮೂಲಕ ಕೋರ್ಟ್‍ಗೆ ವರದಿ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಬಿಟ್ ಕಾಯಿನ್ ವಿಚಾರ ದೇಶ ಮತ್ತು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಪ್ರಕರಣ. ಹೀಗಾಗಿ ವ್ಯಾಪಕ ತನಿಖೆ ಆಗಬೇಕು. ಆರೋಪಿ ಬಂಧಿಸಿ ಬಿಟ್ ಕಾಯಿನ್ ವಶಪಡಿಸಿಕೊಂಡಿದ್ದೇವೆ ಎಂದು ಕೋರ್ಟ್ ಮುಂದೆ ಹೇಳಿದ್ದಾರೆ. ಹಾಗಾದರೆ ಕೋರ್ಟ್‍ಗೆ ಸರಕಾರ ಸುಳ್ಳು ಹೇಳಿತೇ? ತನಿಖೆ ಮಾಡಿದವರು ಸತ್ಯ ಏನೆಂದು ಹೇಳಬೇಕು ಎಂದು ಅವರು ಒತ್ತಾಯಿಸಿದರು.

ಈ ಪ್ರಕರಣದಲ್ಲಿ ನಲಪಾಡ್ ಹೆಸರು ಬರುತ್ತಿದೆ. ನಮಗೂ ನಲಪಾಡ್ ಪರಿಚಯ. ಹಾಗೆಯೇ ಕೆಲವರಿಗೆ ಸ್ನೇಹಿತರು ಇರಬಹುದು. ನಾವು ನಿಷ್ಪಕ್ಷಪಾತ ತನಿಖೆಗೆ ಸಹಕರಿಸುತ್ತೇವೆ. ಕೋರ್ಟ್‍ನಲ್ಲಿ ಇರುವ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡುತ್ತಿದ್ದೇವೆ. ಇದು ರಾಜಕೀಯ ಆರೋಪ ಅಲ್ಲ. ಇದರ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು ಎಂದು ಸುರೇಶ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News