ಕನ್ನಡ ಕಡ್ಡಾಯ: ಕೇಂದ್ರದ ನಿಲುವು ಕೇಳಿದ ಹೈಕೋರ್ಟ್

Update: 2021-11-16 12:26 GMT

ಬೆಂಗಳೂರು, ನ.15: ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಸರಕಾರ ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ಸೂಚಿಸಿದೆ.

ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿರುವ ಸರಕಾರದ ಆದೇಶ ಪ್ರಶ್ನಿಸಿ, ‘ಸಂಸ್ಕøತ ಭಾರತಿ ಟ್ರಸ್ಟ್’, ‘ಹಯಗ್ರೀವ ಟ್ರಸ್ಟ್’, ‘ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ ಫೌಂಡೇಷನ್’ ಹಾಗೂ ‘ಸಂಸ್ಕೃತ ಪ್ರಾಧ್ಯಾಪಕ ಸಂಘ’ಗಳು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. 

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಎಸ್ ನಾಗಾನಂದ್ ಅವರು, ರಾಜ್ಯ ಸರಕಾರ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯ ಮಾಡಿರುವ ಕ್ರಮ ಸುಪ್ರೀಂಕೋರ್ಟ್ ನಿದರ್ಶನಗಳಿಗೆ, ಸಂವಿಧಾನಕ್ಕೆ ವಿರೋಧಿಯಾಗಿದೆ. ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಮಾಡಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕುರಿತು ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾರೆ ಎಂದರು.

ಅಲ್ಲದೇ, ಭಾಷೆಯನ್ನು ಬಲವಂತವಾಗಿ ಕಲಿಸಬಾರದು. ನಾನು ಕನ್ನಡಿಗ, ಕನ್ನಡವನ್ನು ಪ್ರೀತಿಸುತ್ತೇನೆ. ಹಾಗೆಂದು ಹೊರಗಿನಿಂದ ಬಂದವರಿಗೂ ಕನ್ನಡ ಕಲಿಯುವಂತೆ ಒತ್ತಾಯಿಸುವುದು ಸರಿ ಎನ್ನಿಸುವುದಿಲ್ಲ. ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಸುವುದು ಅಷ್ಟು ಸೂಕ್ತವಲ್ಲ. ಹೀಗಾಗಿ, ಸರಕಾರದ ಆದೇಶಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನು ಅಲ್ಲಗಳೆದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಇದೊಂದು ಸರಕಾರದ ನೀತಿ ನಿರೂಪಣೆಗೆ ಸಂಬಂಧಿಸದ ವಿಚಾರ. ಕನ್ನಡ ಕಲಿಕೆ ಪ್ರಶ್ನಿಸಿ ಯಾವುದೇ ವಿದ್ಯಾರ್ಥಿ ಅರ್ಜಿ ಸಲ್ಲಿಸಿಲ್ಲ. ಯಾವುದೇ ವಿದ್ಯಾರ್ಥಿಗೆ ಸಮಸ್ಯೆಯಾಗುತ್ತಿದ್ದರೆ ಅವರು ಬಂದು ಪ್ರಶ್ನಿಸಬೇಕಿತ್ತು. ಆದರೆ, ಇಲ್ಲಿ ಭಾಷೆ ಕಲಿಕೆಯನ್ನು ಪ್ರಶ್ನಿಸಿರುವುದು ವಿದ್ಯಾರ್ಥಿಗಳಲ್ಲ. ಮೂರನೇ ವ್ಯಕ್ತಿಗಳು. ಅವರ ವೈಯಕ್ತಿಕ ಹಿತಾಸಕ್ತಿಗೆ ಈ ಅರ್ಜಿ ಸಲ್ಲಿಸಿದ್ದಾರೆ. ಇತರೆ ಭಾಷಾ ಶಿಕ್ಷಕರ ಹುದ್ದೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ. ಬದಲಿಗೆ ವೈಯಕ್ತಿಕ ಹಿತಾಸಕ್ತಿ ಅರ್ಜಿಯಾಗಿದೆ. ಹೀಗಾಗಿ, ಅರ್ಜಿ ವಜಾಗೊಳಿಸಬೇಕು ಎಂದರು ಕೋರಿದರು.

ಅಲ್ಲದೇ, ಸರಕಾರದ ಈ ಆದೇಶ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧವಾಗಿಲ್ಲ. ವಿದ್ಯಾರ್ಥಿಗಳಿಗೆ ಕನ್ನಡವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಕನ್ನಡ ಗೊತ್ತಿಲ್ಲದವರಿಗೆ ಸರಳವಾಗಿ ಕನ್ನಡ ಕಲಿಸಲು ಪ್ರತ್ಯೇಕ ಪಠ್ಯ ರೂಪಿಸಲಾಗಿದೆ. ಸರಕಾರದ ನೀತಿ ನಿರೂಪಣೆ ವಿಚಾರದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸುವಂತಿಲ್ಲ. ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಕಲಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಲು ನಿರಾಕರಿಸಿದೆ ಎಂದು ವಿವರಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಕನ್ನಡ ಕಲಿಕೆ ಪ್ರೋತ್ಸಾಹಿಸುವುದೇನೋ ಸರಿ. ಆದರೆ ಕಡ್ಡಾಯ ಮಾಡುವುದು ಸರಿಯೇ ಎಂದು ಪ್ರಶ್ನಿಸಿತು. ಬಳಿಕ ಅರ್ಜಿ ಸಂಬಂಧ ಕೇಂದ್ರ ಸರಕಾರ ತನ್ನ ನಿಲುವು ಸ್ಪಷ್ಟಪಡಿಸುವಂತೆ ಸೂಚಿಸಿ ವಿಚಾರಣೆಯನ್ನು ನ.29ಕ್ಕೆ ಮುಂದೂಡಿತು.

ಕೋರಿಕೆ ಏನು: ‘ರಾಜ್ಯದಲ್ಲಿ ಎಲ್ಲ ಪದವಿ ಕಾಲೇಜುಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಮಾಡಿ ರಾಜ್ಯ ಸರಕಾರ 2021ರ ಆ.7ರಂದು ಹೊರಡಿಸಿರುವ ಆದೇಶ, ಭಾಷೆ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ಹೀಗಾಗಿ, ಈ ಆದೇಶ ರದ್ದುಪಡಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News