ಸರಕಾರಿ ಅಭಿಯೋಜಕರ ನೇಮಕ ಮಾಡಲಾಗಿದೆ: ಹೈಕೋರ್ಟ್‍ಗೆ ಹೇಳಿಕೆ

Update: 2021-11-15 16:53 GMT

ಬೆಂಗಳೂರು, ನ.15: ಖಾಲಿ ಇರುವ ಸರಕಾರಿ ಅಭಿಯೋಜಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, 19 ಸರಕಾರಿ ಅಭಿಯೋಜಕರು, 28 ಹಿರಿಯ ಸಹಾಯಕ ಸರಕಾರಿ ಅಭಿಯೋಜಕರನ್ನು ನೇಮಕ ಮಾಡಲಾಗಿದೆ ಎಂದು ಸರಕಾರ ಹೈಕೋರ್ಟ್‍ಗೆ ತಿಳಿಸಿದೆ.

ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ ಸರಕಾರಿ ಅಭಿಯೋಜಕರ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತತ್ವದ ವಿಭಾಗೀಯ ನ್ಯಾಯಪೀಠದಲ್ಲಿ  ಸೋಮವಾರ ನಡೆಯಿತು.

ಈ ವೇಳೆ ಸರಕಾರದ ಪರ ವಕೀಲರು ಮಾಹಿತಿ ನೀಡಿ, ಖಾಲಿ ಇದ್ದ 24 ಸರಕಾರಿ ಅಭಿಯೋಜಕರ ಹುದ್ದೆಗಳ ಪೈಕಿ 19 ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ಅರ್ಹರು ಸಿಗದ ಕಾರಣ 5 ಹುದ್ದೆಗಳಿಗೆ ನೇಮಕಾತಿ ಸಾಧ್ಯವಾಗಿಲ್ಲ. ನಿವೃತ್ತ ಸರಕಾರಿ ಅಭಿಯೋಜಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಂಡರೂ ಯಾರೊಬ್ಬರೂ ಸಿಗಲಿಲ್ಲ. ಅದೇ ರೀತಿ 58 ಹಿರಿಯ ಸಹಾಯಕ ಸರಕಾರಿ ಅಭಿಯೋಜಕರ ಪೈಕಿ 28 ಮಂದಿಯನ್ನು ನೇಮಕ ಮಾಡಲಾಗಿದೆ. ಸಹಾಯಕ ಸರಕಾರಿ ಅಭಿಯೋಜಕರ ಹುದ್ದೆಗಳ ನೇಮಕಾತಿಗೆ ರಾಷ್ಟ್ರೀಯ ಕಾನೂನು ಶಾಲೆ ಪ್ರಾಥಮಿಕ ಹಂತದ ಪರೀಕ್ಷೆ ನಡೆಸಿದೆ. ಡಿಸೆಂಬರ್ ಅಂತ್ಯದೊಳಗೆ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ನೇಮಕಾತಿ ಪ್ರಕ್ರಿಯೆ ಮುಂದುವರಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News