ಅಶಾಂತಿ ಮೂಡಿಸುವವರನ್ನು ಬಂಧಿಸಿ : ನಾಲ್ಕುನಾಡು ಮುಸ್ಲಿಂ ಜಮಾಯತ್ ಒತ್ತಾಯ

Update: 2021-11-16 10:38 GMT

ಮಡಿಕೇರಿ : ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಾದಾಪುರ, ಗರಗಂದೂರು ಮತ್ತು ಶನಿವಾರಸಂತೆ ಭಾಗದಲ್ಲಿ ಮುಸಲ್ಮಾನರ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ನಾಲ್ಕುನಾಡು ಮುಸ್ಲಿಂ ಜಮಾಯತ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಎಂ.ಎಚ್.ಅಬ್ದುಲ್ ರಹ್ಮಾನ್, ಉಪಾಧ್ಯಕ್ಷರಾದ ಪಿ.ಎಂ.ಸಲೀಂ ಹ್ಯಾರಿಸ್, ಪಿ.ಎಂ.ಹಂಸ ಪಡಿಯಾಣಿ, ಎಚ್.ಎ.ಹಂಸ ಕೊಟ್ಟಮುಡಿ ಹಾಗೂ ಖಜಾಂಚಿ ಎಂ.ಎ.ಮನ್ಸೂರ್ ಆಲಿ ತಿಳಿಸಿದ್ದಾರೆ.

ವಿನಾಕಾರಣ ಮುಸ್ಲಿಂ ಯುವಕರನ್ನು ಗುರಿಯಾಗಿಸಿಕೊಂಡು ಹಲ್ಲೆ ಪ್ರಕರಣಗಳು ನಡೆಯುತ್ತಿದೆ. ಕ್ಷುಲ್ಲಕ ವಿಚಾರಕ್ಕೆ ನಡೆದ ಕಲಹಗಳಿಗೂ ಕೋಮು ಪ್ರಚೋದನೆಯ ಬಣ್ಣ ಬಳಿಯಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಕೊಡಗು ಜಿಲ್ಲೆಯಾದ್ಯಂತ ಹಿಂದೂ ಹಾಗೂ ಮುಸಲ್ಮಾನರು ಒಗ್ಗಟ್ಟಿನಿಂದ ಶಾಂತಿಯುತವಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಸೋಮವಾರಪೇಟೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಾತ್ರ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ. ಶನಿವಾರಸಂತೆ ಪೊಲೀಸ್ ಠಾಣೆ ಎದುರು ಮುಸ್ಲಿಂ ಮಹಿಳೆಯರು ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ “ಅಂಬೇಡ್ಕರ್ ಜಿಂದಾಬಾದ್” ಎಂದು ಘೋಷಣೆ ಕೂಗಿದ್ದಾರೆ. ಆದರೆ ಕೆಲವು ವ್ಯಕ್ತಿಗಳು ಈ ಘೋಷಣೆಯನ್ನು ತಿರುಚಿ “ಪಾಕಿಸ್ತಾನ ಪರ'' ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇದು ಶಾಂತಿಯುತ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಪ್ರಯತ್ನವಾಗಿದೆ ಎಂದು ತಿಳಿಸಿರುವ ಪ್ರಮುಖರು, ಘೋಷಣೆಯನ್ನು ತಿರುಚಿ ಜನರ ಹಾದಿ ತಪ್ಪಿಸಿದವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳು ಹೀಗೆ ಮುಂದುವರೆದರೆ ನ್ಯಾಯಕ್ಕಾಗಿ ಒತ್ತಾಯಿಸಿ ಕಾನೂನಿನ ಚೌಕಟ್ಟಿನಡಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾದಾಪುರ ಮತ್ತು ಗರಗಂದೂರಿನಲ್ಲಿ ಹಲ್ಲೆಗೊಳಗಾದ ಮುಸ್ಲಿಂ ಯುವಕರು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಮಿತಿಯು ಇವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಮುಖರು ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News