ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಪ್ರಕರಣ: ಎಫ್‍ಎಸ್‍ಎಲ್ ಪರಿಶೀಲನೆಗೆ ಹೈಕೋರ್ಟ್ ಅಸ್ತು

Update: 2021-11-16 12:38 GMT

ಬೆಂಗಳೂರು, ನ.16: ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್)ಕ್ಕೆ ಕಳುಹಿಸಲು ಹೈಕೋರ್ಟ್ ಅನುಮತಿ ನೀಡಿದೆ. 

ಈ ಕುರಿತ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. 

2020ರಲ್ಲಿ ರಿಟ್ ಅರ್ಜಿಯೊಂದರ ವಿಚಾರಣೆ ವೇಳೆ ಅಕ್ರಮ ಬೆಳಕಿಗೆ ಬಂದಿತ್ತು. ಶಾ ಹೀರಾಲಾಲ್ ಭಿಕಾಬಾಯಿ ಕಂಪೆನಿಗೆ ಸೇರಿದ ಆಸ್ತಿಯನ್ನು ಮಾಲಕರ ಗಮನಕ್ಕೇ ತರದೆ ಕೆಲ ವ್ಯಕ್ತಿಗಳು ಕಬಳಿಸಲು ಸಂಚು ರೂಪಿಸಿದ್ದರು. ನಕಲಿ ದಾಖಲೆ ಸೃಷ್ಟಿಸಿದ್ದಲ್ಲದೇ ಕೆಲ ನಕಲಿ ವ್ಯಕ್ತಿಗಳನ್ನು ಕಟ್ಟಡದ ಬಾಡಿಗೆದಾರರೆಂದು ಹೆಸರಿಸಿ ಯಶವಂತಪುರದ 5600 ಚದರಡಿ ಜಾಗದಿಂದ ಅವರನ್ನು ಖಾಲಿ ಮಾಡಿಸಲು ಕೋರ್ಟ್‍ನಲ್ಲಿ 2018ರಲ್ಲಿ ಕೇಸ್ ದಾಖಲಿಸಲಾಗಿತ್ತು.

ನಂತರ ಒಂದೇ ತಿಂಗಳಲ್ಲಿ ಆ ನಕಲಿ ಮಾಲಕರು, ನಕಲಿ ಬಾಡಿಗೆದಾರರೊಂದಿಗೆ ರಾಜಿ ಸಂಧಾನ ಮಾಡಿಕೊಂಡು ಕೇಸನ್ನು ಇತ್ಯರ್ಥ ಪಡಿಸಿಕೊಂಡು ಇದಕ್ಕೆ ಕೋರ್ಟ್ ಡಿಕ್ರಿ ಪಡೆದಿದ್ದರು. ನಂತರ ಈ ಡಿಕ್ರಿ ಬಳಸಿ ಮೂಲ ಮಾಲಕರನ್ನೇ ಸ್ವಾಧೀನದಿಂದ ಹೊರಹಾಕಲು ಯತ್ನಿಸಿದ್ದರು. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಮೂಲ ಮಾಲಕರು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. 

ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿದ್ದರು. ಪ್ರಕರಣದ ಗಂಭೀರತೆ ಪರಿಗಣಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿತ್ತು. ಸಿಐಡಿ ತನಿಖೆ ವೇಳೆ ಈ ಅಕ್ರಮದಲ್ಲಿ ಕೆಲವು ವಕೀಲರೂ ಪಾಲ್ಗೊಂಡಿದ್ದು ಪತ್ತೆಯಾಗಿತ್ತು.

ಒಟ್ಟು 118 ಇಂತಹ ಪ್ರಕರಣ ನಡೆದಿರುವುದು ಸಿಐಡಿ ತನಿಖೆ ವೇಳೆ ಪತ್ತೆಯಾಗಿದೆ. ನೋಟರಿ ದಾಖಲೆಗಳನ್ನೂ ಬಳಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಕೋರ್ಟ್‍ಗೆ ಸಲಹೆ ನೀಡಲು ವಕೀಲ ಶ್ರೀಧರ್ ಪ್ರಭುರನ್ನು ಅಮಿಕ್ಯೂಸ್ ಕ್ಯೂರಿಯಾಗಿ ನೇಮಿಸಿತ್ತು. ಮಂಗಳವಾರ ಕೋರ್ಟ್‍ಗೆ ಹೇಳಿಕೆ ನೀಡಿದ ಅಮಿಕ್ಯೂಸ್ ಕ್ಯೂರಿ ನೋಟರಿ ದಾಖಲೆಗಳನ್ನೂ ಡಿಜಿಟಲೀಕರಣ ಮಾಡುವ ಅಗತ್ಯವಿದೆ. ನೋಟರಿ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ಅಂತಿಮ ಆದೇಶದ ವೇಳೆ ಈ ಬಗ್ಗೆ ಪರಿಗಣಿಸುವುದಾಗಿ ಹೇಳಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಸದ್ಯ ಜಮೀನಿನ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಅನುಮತಿ ನೀಡಿದೆ. ತನಿಖೆ ಪ್ರಗತಿ ವರದಿ ಸಲ್ಲಿಸಲು ಸಿಐಡಿ ಪೆÇಲೀಸರಿಗೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News