×
Ad

ಸಮ್ಮಿಶ್ರ ಸರಕಾರದ ಅವಧಿಯಲ್ಲಿನ ಕಾಮಗಾರಿ ಸ್ಥಗಿತ: ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

Update: 2021-11-16 22:17 IST

ಬೆಂಗಳೂರು, ನ.16: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಘೋಷಿಸಿದ್ದ ನವ ಬೆಂಗಳೂರು ಯೋಜನೆ ಕಾಮಗಾರಿ ಮತ್ತು ಅವುಗಳ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ 3 ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಹೈಕೋರ್ಟ್, ರಾಜ್ಯ ಸರಕಾರ ಮತ್ತು ಬಿಬಿಎಂಪಿಗೆ ಸೂಚಿಸಿದೆ.

ಸಮ್ಮಿಶ್ರ ಸರಕಾರದ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಅಂದಿನ ಸಿಎಂ ಬಿಎಸ್‍ವೈ ಪತ್ರ ಆಧರಿಸಿ ನವ ಬೆಂಗಳೂರು ಯೋಜನೆ ಸ್ಥಗಿತಗೊಳಿಸಿದ ಆದೇಶ ಪ್ರಶ್ನಿಸಿ ನಗರದ ನವೀನ್ ಕುಮಾರ್ ಎಂಬುವರು ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ನವ ಬೆಂಗಳೂರು ಯೋಜನೆ ಅಡಿ ಕೈಗೊಂಡಿದ್ದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿದರು.

ಸರಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಅರ್ಜಿಗೆ ಸಂಬಂಧಿಸಿದಂತೆ ವಿವರವಾದ ಆಕ್ಷೇಪಣೆ ಸಲ್ಲಿಸಬೇಕಿದೆ. ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಮನವಿ ಪರಿಗಣಿಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರ ಮತ್ತು ಬಿಬಿಎಂಪಿಗೆ 3 ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.

ಪ್ರಕರಣವೇನು: ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆ ಅಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ 9 ಸಾವಿರ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿತ್ತು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಡಿಯೂರಪ್ಪ 2019ರ ಆಗಸ್ಟ್ 3ರಂದು ನಗರಾಭಿವದ್ಧಿ ಇಲಾಖೆಗೆ ಬರೆದ ಟಿಪ್ಪಣಿ ಆಧರಿಸಿ ಕಾಮಗಾರಿಗಳು ಹಾಗೂ ಟೆಂಡರ್‍ಗಳನ್ನು ಸ್ಥಗಿತಗೊಳಿಸಿ ಆ.5ರಂದು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿರುವ ಅರ್ಜಿದಾರರು, ಕಾಮಗಾರಿ ಮುಂದುವರಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News