ಪೇಜಾವರ ಶ್ರೀ ಕುರಿತು ಹೇಳಿಕೆ; ಹಂಸಲೇಖ ಬೆಂಬಲಕ್ಕೆ ದಲಿತ ಸಂಘರ್ಷ ಸಮಿತಿ
ಶಿವಮೊಗ್ಗ,ನ.16: ದಲಿತರ ಮನೆಯಲ್ಲಿ ವಾಸ್ತವ್ಯ ಹೂಡುವುದಕ್ಕಿಂತ ದಲಿತರನ್ನೇ ತಮ್ಮ ಮನೆಗೆ ಕರೆಯಿಸಿ ಊಟ ಹಾಕಿಸಲಿ ಎಂಬ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಹೇಳಿಕೆ ಅತ್ಯಂತ ಸಮಂಜಸವಾಗಿದೆ ಮತ್ತು ಅರ್ಥಪೂರ್ಣವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ದೇಶದಲ್ಲಿ ಭಗವದ್ಗೀತೆ ಯಾರಿಗೆ ಒಳ್ಳೆಯದು ಮಾಡಿದೆಯೋ ಗೊತ್ತಿಲ್ಲ, ಆದ್ರೆ ಬಡವರ ಗೀತೆಯಾಗಿರುವ ಸಂವಿಧಾನದಿಂದ ಎಲ್ಲರಿಗೂ ಸಮಾನತೆ ಸಿಕ್ಕಿದೆ. ಕೆಲವು ಜಾತಿವಾದಿಗಳು ಹಂಸಲೇಖರ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಿದೆ. ಈ ದೇಶದಲ್ಲಿ ಮೂರು ಪರ್ಸೆಂಟ್ ಇರುವ ಮನುವಾದಿಗಳು ಹಂಸಲೇಖರು ಕ್ಷಮೆ ಕೇಳೋದಕ್ಕೆ ಸಾಮಾಜಿಕ ಜಾಲತಾಣವನ್ನು ಒಂದು ವೇದಿಕೆಯನ್ನಾಗಿ ಮಾಡಿಕೊಂಡರು. ಆದರೆ 85 ಪರ್ಸೆಂಟ್ ಇರುವ ಜನ ಅದನ್ನು ಪ್ರತಿಭಟಿಸುವಲ್ಲಿ ಸೋತಿದ್ದಾರೆ ಎಂದು ಹೇಳಿದರು.
ಯಾರು ದಲಿತರ ಪರವಾಗಿ ಧ್ವನಿ ಎತ್ತುತ್ತಾರೋ ಅಂತವರ ದ್ವನಿ ಅಡಗಿಸುವ ಕೆಲಸ ಈ ಮೂರ್ಸೆಂಟ್ ಇರುವ ಜನರು ಮಾಡುತ್ತಿದ್ದಾರೆ. ಬಸವಣ್ಣ,ಬುದ್ದ,ಗೌತಮರಿಂದ ಹಿಡಿದು ಗೌರಿ ,ಕಲ್ಬುರ್ಗಿ, ಪನ್ಸಾರೆ ಹಾದಿಯಾಗಿ ಎಲ್ಲರೂ ದಲಿತರ ಪರವಾಗಿ ಧ್ವನಿ ಎತ್ತಿದವರೇ.ದಲಿತರ ವಿರುದ್ಧ ದಲಿತರು ಮಾತನಾಡಿದರೆ ಅದು ದೊಡ್ಡದಾಗುವುದಿಲ್ಲ. ಆದ್ರೆ ಅನ್ಯಜಾತಿಯನು ದಲಿತರ ಪರವಾಗಿ ಮಾತನಾಡಿದ್ರೆ, ಅವರ ಧ್ವನಿ ಅಡಗಿಸುವ ಕೆಲಸ ಮನುವಾದಿಗಳಿಂದ ನಡೆಯುತ್ತಿದೆ ಎಂದರು.
ಸಂಸದ ಪ್ರತಾಪ್ ಸಿಂಹ ಕೂಡ ಪ್ರಿಯಾಂಕ ಖರ್ಗೆಯವರು ದಲಿತ ಎಂಬ ಕಾರಣಕ್ಕೆ ಅವರನ್ನು ಗಂಡಸೋ ಹೆಂಗಸೋ ಎಂದು ಪ್ರಶ್ನಿಸಿದ್ದಾರೆ. ಹಾಗಿದ್ರೆ ಇವನ ಹೆಸರು ಕೂಡ ಪ್ರತಾಪಸಿಂಹ ಎಂದಿದೆ. ಹಾಗಾದರೆ ಈತ ಮೃಗದ ಜಾತಿಗೆ ಸೇರಿದ್ದಾನೆ ಎಂದು ಅರ್ಥವಲ್ಲವೇ ಎಂದು ಪ್ರಶ್ನಿಸಿದ ಅವರು, ಇಂತಹ ಮೃಗಗಳ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದರು.
ಹೀಗಾಗಿ ಹಂಸಲೇಖ ಈ ದೇಶದಲ್ಲಿ ಡೇಮಾಕ್ರಸಿ ಅಳಿಸುತ್ತಿದೆ. ಧರ್ಮಾಕ್ರಸಿ ಆವರಿಸಿಕೊಳ್ಳುತ್ತಿದೆ ಎಂದು ಹೇಳಿದ್ದರು.ಧರ್ಮಾಕ್ರಸಿ ಬಂದ್ರೆ ಮತ್ತೆ ಭಗವದ್ಗೀತೆಯ ಕಾಲಕ್ಕೆ ಹೋಗಬೇಕಾಗುತ್ತದೆ ಹೀಗಾಗಿ ಸಂವಿಧಾನ ಕಾಪಾಡಬೇಕಾಗಿದೆ. ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ. ಇಲ್ಲವಾದಲ್ಲಿ ಆತಂಕದ ದಿನಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಹಂಸಲೇಖರವರು ನೀಡಿರುವ ಹೇಳಿಕೆಯನ್ನು ಡಿಎಸ್‌ಎಸ್ ಸಮರ್ಥಿಸುತ್ತದೆ ಎಂದ ಗುರುಮೂರ್ತಿ ಅವರು, ಹಂಸಲೇಖರು ದೃತಿಗೆಡುವ ಅವಶ್ಯಕತೆಯಿಲ್ಲ,ಅವರ ಪರವಾಗಿ ಡಿಎಸ್‌ಎಸ್ ಕೆಲಸ ಮಾಡುತ್ತದೆ ಎಂದರು.