ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನದಲ್ಲಿ ಮನರಂಜನೆಗೆ ಅನುಮತಿ ಬೇಡ: ಹೈಕೋರ್ಟ್
ಬೆಂಗಳೂರು, ನ.16: ವಿಜಯನಗರ ಜಿಲ್ಲೆ ಕಮಲಾಪುರ ತಾಲೂಕಿನ ಬಿಳಿಕಲ್ಲು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ `ಅಟಲ್ ಬಿಹಾರಿ ವಾಜಪೇಯಿ ಪ್ರಾಣಿಶಾಸ್ತ್ರೀಯ ಉದ್ಯಾನ'ದಲ್ಲಿ ಮನರಂಜನೆ ಅಥವಾ ವಿನೋದ ಚಟುವಟಿಕೆಗಳಿಗೆ ಅನುಮತಿಸಬಾರದು ಎಂದು ಹೈಕೋರ್ಟ್ ತಾಕೀತು ಮಾಡಿದೆ.
ಉದ್ಯಾನವನ್ನು ಬಳ್ಳಾರಿಯಿಂದ ಹೊಸಪೇಟೆಗೆ (ವಿಜಯನಗರ) ಸ್ಥಳಾಂತರಿಸುವುದನ್ನು ಮತ್ತು ಅಗತ್ಯ ಪರವಾನಿಗೆಗಳನ್ನು ಪಡೆದುಕೊಳ್ಳದ ಹಿನ್ನಲೆಯಲ್ಲಿ ಬಿಳಿಕಲ್ಲು ಸಂರಕ್ಷಿತ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಮಾಡುವುದನ್ನು ಆಕ್ಷೇಪಿಸಿ ಪರಿಸರ ಹೋರಾಟಗಾರ 2017ರಲ್ಲಿ ಸಂತೋಷ್ ಮಾರ್ಟಿನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆ ಬಂದಿತ್ತು.
ಈ ವೇಳೆ ಸರಕಾರದ ಪರ ವಕೀಲರು ವಾದ ಮಂಡಿಸಿ, ಉದ್ಯಾನ ನಿರ್ಮಾಣಕ್ಕೆ ಅಗತ್ಯ ಅರಣ್ಯ ಮತ್ತು ಪರಿಸರ ಪರವಾನಿಗೆಗಳನ್ನು ಪಡೆದುಕೊಳ್ಳಲಾಗಿದೆ. ಅರಣ್ಯ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಲು ಅರಣ್ಯ ಸಂರಕ್ಷಣಾ ಸಮಿತಿ ಅನುಮೋದನೆ ನೀಡಿದೆ. ರಾಜ್ಯ ಸರಕಾರದ ನಿಲುವನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಬೆಂಬಲಿಸಿದೆ. 20 ಸಾವಿರ ಚದರ ಕಿ.ಮೀ.ಗಿಂತ ಕಡಿಮೆ ವಿಸ್ತೀರ್ಣ ಇದ್ದಾಗ ಪರಿಸರ ಪರವಾನಿಗೆ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈಗಾಗಲೇ ಉದ್ಯಾನ ಸ್ಥಳಾಂತರಗೊಂಡಿದೆ. ಮೇಲಾಗಿ, ಎಲ್ಲ ರೀತಿಯ ಪರವಾನಿಗೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ರಾಜ್ಯ ಸರಕಾರ ವಿವರಣೆ ನೀಡಿದೆ. ಹೀಗಿದ್ದಾಗ, ಮಧ್ಯಪ್ರವೇಶಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ. ಆದರೆ, ಉದ್ಯಾನದಲ್ಲಿ ಮನರಂಜನೆ ಅಥವಾ ವಿನೋದದ ಚಟುವಟಿಕೆಗಳಿಗೆ ಅನುಮತಿಸಬಾರದು. ಉದ್ಯಾನಕ್ಕೆ ಅಗತ್ಯವಿರುವ ನಿರ್ಮಾಣ ಕಾಮಗಾರಿ ಮಾತ್ರ ಕೈಗೊಳ್ಳಬೇಕು. ಅಗತ್ಯ ಕಾನೂನು ಪರವಾನಿಗೆ, ಅನುಮೋದನೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿ ಅರ್ಜಿಯನ್ನು ಇತ್ಯರ್ಥಪಡಿಸಿತು.