COP-26-ಮತ್ತೊಂದು ದ್ರೋಹ: ಭುವಿಗೆ ಬೆಂಕಿ ಇಟ್ಟವರು ಉರಿಯ ತಾಪವ ತಣಿಸಬಲ್ಲರೇ?

Update: 2021-11-16 19:30 GMT

ಜಾಗತಿಕ ತಾಪಮಾನವು ಶತಾಯಗತಾಯ 1850ಕ್ಕಿಂತ 1.5 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಾಗದಂತೆ ನೋಡಿಕೊಳ್ಳುವ ತುರ್ತನ್ನು ಇಂದು ಜಗತ್ತು ಎದುರಿಸುತ್ತಿದೆ. ಹಾಗೆ ಮಾಡಬೇಕೆಂದರೆ 1850ಕ್ಕೆ ಹೋಲಿಸಿದಲ್ಲಿ ಜಗತ್ತು ಹೆಚ್ಚೆಂದರೆ 1 ಲಕ್ಷ ಕೋಟಿ ಟನ್ ಕಾರ್ಬನ್ ಅನ್ನು ಮಾತ್ರ ಹೊರ ಹಾಕಬಹುದು. ಇದನ್ನು ಕಾರ್ಬನ್ ಬಜೆಟ್ ಎಂದು ಕರೆಯಲಾಗುತ್ತದೆ. ಆದರೆ 2021ರ ವೇಳೆಗೆ ಜಗತ್ತು ಅದರಲ್ಲಿ ಶೇ. 86ರಷ್ಟನ್ನು ಬಳಸಿ ಆಗಿದೆ. ಅದರಲ್ಲಿ ಸಿಂಹಪಾಲು ಅಮೆರಿಕ, ಕೆನಡ ಹಾಗೂ ಪಶ್ಚಿಮ ಯುರೋಪ್, ಜಪಾನ್, ಚೀನಾ ಮತ್ತು ಭಾರತದ್ದು.


ಭೂತಾಯಿಗೆ ಜಗತ್ತಿನ ಶ್ರೀಮಂತ ದೇಶಗಳು ಹಚ್ಚಿರುವ ಬೆಂಕಿಯನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಗ್ಲಾಸ್ಗೋದಲ್ಲಿ ಸೇರಿದ್ದ ಜಗತ್ತಿನ 200 ದೇಶಗಳ 26ನೇ Conference Of Parties-COP-26-ಸಮ್ಮೇಳನವು ಶ್ರೀಮಂತ ದೇಶಗಳ ಲಾಭಕೋರತನ ಮತ್ತು ಭಾರತದ ಮೋದಿ ಸರಕಾರ ಹಾಗೂ ಚೀನಾ ಸರಕಾರಗಳ ಸಂಕುಚಿತ ಸ್ವಾರ್ಥ ಮತ್ತು ಉಡಾಫೆಗಳಿಂದಾಗಿ ವಿಫಲಗೊಂಡಿದೆ. ವಾಸ್ತವವಾಗಿ ಈ ಸಮ್ಮೇಳನ ಇಡೀ ಜಗತ್ತಿನ ಜೀವ ಸಂಕುಲದ ಉಳಿವಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿತ್ತು. ಏಕೆಂದರೆ ಕಳೆದ ಅರ್ಧ ಶತಮಾನದಲ್ಲಿ ಒಂದೇ ಸಮನೆ ಏರುತ್ತಿರುವ ಜಾಗತಿಕ ತಾಪಮಾನವನ್ನು ತಡೆಯದೆ ಹೋದಲ್ಲಿ ಮುಂದಿನ ದಶಕಗಳಲ್ಲಿ ಶ್ರೀಮಂತ-ಬಡ ದೇಶಗಳೆಂಬ ಭೇದಭಾವವಿಲ್ಲದೆ ಇಡೀ ಮನುಕುಲ ಸರ್ವನಾಶವಾಗಲಿದೆ. ಈ ಬಗ್ಗೆ 2015ರಲ್ಲಿ ನಡೆದ ಪ್ಯಾರಿಸ್ ಸಮ್ಮೇಳನದಲ್ಲಿ ಜಗತ್ತಿನ ಎಲ್ಲಾ ದೇಶಗಳು ತಮ್ಮ ತಮ್ಮ ಪಾಲಿನ ಕರ್ತವ್ಯವನ್ನು ತಾವೇ ನಿಗದಿ ಮಾಡಿಕೊಂಡು (Nationally Determined Contributions-NDC) ನಿರ್ವಹಿಸುವುದಾಗಿ ವಚನ ಇತ್ತಿದ್ದವು. ಜಾಗತಿಕ ಮೇಲುಸ್ತುವಾರಿ ಮತ್ತು ಗಂಭೀರ ತಪಾಸಣೆಯ ಅಂಶಗಳನ್ನು ಆಗ ಬಲವಾಗಿ ವಿರೋಧಿಸಿದ್ದ ಶ್ರೀಮಂತ ದೇಶಗಳು ಈ ಎನ್‌ಡಿಸಿಯೆಂಬ ದುರ್ಬಲ ಸೂತ್ರವನ್ನು ಮುಂದಿಟ್ಟಾಗಲೇ ಪ್ಯಾರಿಸ್ ತೀರ್ಮಾನಗಳು ಜಾರಿಯಗುವ ಬಗ್ಗೆ ಬಲವಾದ ಅನುಮಾನಗಳಿದ್ದವು. ಆದರೂ ಈ ಜಾಗತಿಕ ತೀರ್ಮಾನಗಳನ್ನು ಮತ್ತು ಗುರಿಗಳನ್ನು ಐದು ವರ್ಷಗಳಿಗೊಮ್ಮೆ ಪರಿಶೀಲಿಸಿ ಅನುಷ್ಠಾನದ ಪರಿಶೀಲನೆ ಹಾಗೂ ಗುರಿಗಳಲ್ಲಿ ಅಗತ್ಯವಿರುವ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದಾಗಿ 2020ರಲ್ಲಿ ನಡೆಯಬೇಕಿದ್ದ ಈ ಅತಿಮುಖ್ಯವಾದ ಸಮ್ಮೇಳನ 2021ರ ನವೆಂಬರ್ 1ರಿಂದ 14ರವರೆಗೆ ನಡೆಯಿತು. ಜಗತ್ತಿನ ಉಳಿವಿನ ಸಾಧ್ಯತೆಗಳು ಈ ಸಮ್ಮೇಳನದ ಫಲಿತಾಂಶಗಳನ್ನು ನೇರವಾಗಿ ಅವಲಂಬಿಸಿದ್ದರಿಂದ ಇಡೀ ಜಗತ್ತು ಈ ಸಮ್ಮೇಳನದತ್ತ ಆತಂಕ ಹಾಗೂ ಕಳವಳದಿಂದ ನೋಡುತ್ತಿತ್ತು. ಆದರೆ ಇಲ್ಲಿ ನಡೆದದ್ದೇನು ಎಂಬುದನ್ನು ಅರ್ಥ ಮಾಡಿಕೊಳ್ಳುವ ಮುಂಚೆ ಇಂದು ಜಗತ್ತು ಎದುರಿಸುತ್ತಿರುವ ಪರಿಸರ ತುರ್ತುಪರಿಸ್ಥಿತಿಯ ಸ್ವರೂಪ ಹಾಗೂ ಅದರ ತಡೆಗೆ ಪ್ಯಾರಿಸ್ ಸಮ್ಮೇಳನದವರೆಗೆ ಜಾಗತಿಕ ಸಮುದಾಯ, ಸರಕಾರಗಳು ತೆಗೆದುಕೊಂಡ ನಿರ್ಣಯಗಳ ಹಿನ್ನೆಲೆಯನ್ನು ಸ್ವಲ್ಪಪರಿಶೀಲಿಸೋಣ

ಭೂಮಿಗೆ ಬೆಂಕಿ ಇಟ್ಟವರು ಯಾರು?

ನಭೋಮಂಡಲದಲ್ಲಿ ಕೋಟ್ಯಂತರ ಆಕಾಶಕಾಯಗಳಿದ್ದರೂ ಭೂಮಿಯಲ್ಲಿ ಮಾತ್ರ ಜೀವಸೃಷ್ಟಿಯಾಗಲು ಕೆಲವು ನಿರ್ದಿಷ್ಟ ಕಾರಣಗಳಿವೆ. ಭೂಮಿಯನ್ನು ಬಿಟ್ಟಂತೆ ಉಳಿದ ಅಕಾಶಕಾಯಗಳೊಳಗೆ ಇರುವ ತಾಪಮಾನ ಒಂದೋ ಅತಿಕಡಿಮೆ (-40ಡಿಗ್ರಿ ಸೆಂಟಿಗ್ರೇಡ್‌ಕ್ಕಿಂತಲೂ ಕಡಿಮೆ) ಅಥವಾ ಅತಿಹೆಚ್ಚು (300 ಡಿಗ್ರಿಗಳ ಆಸುಪಾಸು). ಈ ಎರಡು ಸಂದರ್ಭಗಳಲ್ಲೂ ಜೀವ ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಮೊದಲು ಭೂಮಿಯ ಮೇಲ್ಮೈ ತಾಪಮಾನ ಸಹ -20ರಷ್ಟಿತ್ತು. ಆಗ ಭೂಗೋಳದಲ್ಲಿ ಶೇ.75ರಷ್ಟು ಸಾರಜನಕ ಮತ್ತು ಶೇ.20ರಷ್ಟು ಆಮ್ಲಜನಕವಿತ್ತು. ಆಮ್ಲಜನಕ ಜೀವವಾಯುವಾದರೂ ಜೀವ ಸೃಷ್ಟಿಗೆ ಬೇಕಾದಷ್ಟು ತಾಪಮಾನ ಆಗಿನ್ನೂ ಭೂಮಿಯ ಮೇಲ್ಮೈನಲ್ಲಿರಲಿಲ್ಲ. ಆದರೆ ಭೂಮಿಯ ವಾತಾವರಣದಲ್ಲಿ ಈ ಎರಡು ಅನಿಲಗಳ ಜೊತೆಜೊತೆಗೆ ಕಾರ್ಬನ್‌ಡೈಆಕ್ಸೈಡ್, ಮೀಥೇನ್‌ನಂತಹ ಅನಿಲಗಳೂ ಇದ್ದವು. ಈ ಅನಿಲಗಳು ಸೂರ್ಯನ ಬೆಳಕಿನ ವಿಕಿರಣದ ಮೂಲಕ ಭೂಪದರವನ್ನು ಪ್ರವೇಶಿಸುವ ಶಾಖವನು ಹೀರಿಕೊಳ್ಳುತ್ತಿದ್ದವು ಮತ್ತು ಅದನ್ನು ಭೂಮಂಡಲದ ವಾತಾವರಣಕ್ಕೆ ಮರುಹಾಯಿಸಿದವು. ಇದರಿಂದ ಭೂಮಿಯ ಮೇಲ್ಮೈ ತಾಪಮಾನ ನಿಧಾನವಾಗಿ -20ರಿಂದ 10ಡಿಗ್ರಿಗೆ ತಲುಪಿತು. ಈ ಸಂದರ್ಭದಲ್ಲಿ ಜೀವವಾಯುವಿನ ಸಹಾಯದೊಂದಿಗೆ ಈ ಭೂಗ್ರಹದಲ್ಲಿ ಜೀವಸೃಷ್ಟಿಯಾಯಿತು ಹಾಗೂ ಅದು ಕಳೆದ 20,000 ವರ್ಷಗಳಿಂದ ಹೆಚ್ಚಿನ ಏರುಪೇರಿಲ್ಲದೆ ಸ್ಥಾಯಿಸ್ವರೂಪ ಪಡೆದುಕೊಂಡಿತು. ಹೀಗಾಗಿಯೇ ಕಳೆದ 8-10 ಸಾವಿರ ವರ್ಷಗಳ ಹಿಂದೆ ಹೆಚ್ಚೂ ಕಡಿಮೆ ಸಮಕಾಲೀನವಾಗಿ ಜಗತ್ತಿನ ವಿವಿಧ ಭಾಗಗಳಲ್ಲಿ ಸ್ಥಿರ ಕೃಷಿ, ಹಾಗೂ ನಾಗರಿಕತೆಗಳು ಹುಟ್ಟಿಕೊಂಡವು. ಆದರೆ 18ನೇ ಶತಮಾನದಲ್ಲಿ ಕೈಗಾರಿಕಾ ಕ್ರಾಂತಿ ಸಂಭವಿಸಿ ಮನುಷ್ಯ ಸಮಾಜದಲ್ಲಿ ಲಾಭದ ದುರಾಸೆಗೆ ಇತರರನ್ನು ಮತ್ತು ಪ್ರಕೃತಿಯನ್ನೂ ಶೋಷಿಸುವ ಬಂಡವಾಳಶಾಹಿ ವರ್ಗವೊಂದು ಸೃಷ್ಟಿಯಾಯಿತು. ಈ ಬಂಡವಾಳಶಾಹಿ ತನ್ನ ದೇಶದ ಮಿತಿಯಲ್ಲಿ ಮಾತ್ರವಲ್ಲದೆ ಪ್ರಪಂಚದೆಲ್ಲೆಡೆ ಎಲ್ಲೆಲ್ಲಿ ಸಂಪನ್ಮೂಲಗಳಿವೆಯೋ ಅಲ್ಲೆಲ್ಲಾ ಲೂಟಿ ಮಾಡಲು ಪ್ರಾರಂಭಿಸಿತು. ಅದರಲ್ಲೂ ತನ್ನ ಕೈಗಾರಿಕೆಗಳಿಗಾಗಿ ಇಂಧನ ಮೂಲವಾಗಿ ಭೂಗರ್ಭದ ಪೆಟ್ರೋಲಿಯಂ ಉತ್ಪನ್ನಗಳನ್ನು ಬೇಕಾಬಿಟ್ಟಿಯಾಗಿ ಬಳಸಲು ಪ್ರಾರಂಭಿಸಿತು.

ಆದರೆ ಈ ಪೆಟ್ರೋಲಿಯಂನಂತಹ ಇಂಧನಗಳನ್ನು ಉರಿಸಿದಾಗ ಅಪಾರ ಪ್ರಮಾಣದಲ್ಲಿ ಕಾರ್ಬನ್‌ಡೈಯಾಕ್ಸೈಡ್‌ನಂತಹ ಅನಿಲಗಳು ಉತ್ಪಾದನೆ ಯಾಗುತ್ತವೆ. ನೈಸರ್ಗಿಕ ಅನಿಲಗಳು ಮತ್ತು ಆಧುನಿಕ ಕೃಷಿಗಳು ಮೀಥೇನ್ ಎಂಬ ಅನಿಲವನ್ನು ಅತಿ ಹೆಚ್ಚಾಗಿ ಉತ್ಪಾದಿಸುತ್ತವೆ. ಇಂತಹ ಅನಿಲಗಳನ್ನೇ ‘‘ಹಸಿರು ಮನೆ ಅನಿಲ’’ವೆಂದು ಕರೆಯುತ್ತಾರೆ. ಅವು ಸೂರ್ಯನ ಶಾಖವನ್ನು ಹೀರಿ ಮರಳಿ ವಾತಾವರಣಕ್ಕೆ ಬಿಡುವುದನ್ನು ‘‘ಹಸಿರು ಮನೆ ಪರಿಣಾಮ’’ವೆಂದು ಕರೆಯುತ್ತಾರೆ. ಹೀಗಾಗಿ ವಾತಾವರಣದಲ್ಲಿ ಕಾರ್ಬನ್‌ಡೈಯಾಕ್ಸೈಡ್‌ನಂತಹ ಅನಿಲಗಳು ಹೆಚ್ಚಾಗುತ್ತಿದ್ದಂತೆ ಭೂಮಿಯ ತಾಪಮಾನವೂ ಹೆಚ್ಚಾಗಲು ಪ್ರಾರಂಭವಾಯಿತು. ಮೊದಲು ಇದು ಗೋಚರವಾದದ್ದು ಧ್ರುವ ಪ್ರದೇಶಗಳಲ್ಲಿ ದಿನೇದಿನೇ ಹಿಮಗಡ್ಡೆಗಳ ಪ್ರಮಾಣ ಕುಸಿಯುವುದರ ಮೂಲಕ. 1800ರಿಂದ ಭೂಮಿಯ ತಾಪಮಾನ ಮತ್ತು ಸಾಗರದ ಮೇಲ್ಮೈ ತಾಪಮಾನವನ್ನು ವೈಜ್ಞಾನಿಕವಾಗಿ ಅಂದಾಜು ಮಾಡುವುದು ಸಾಧ್ಯವಾಗಿತ್ತು.

ಧರೆ ಹತ್ತಿ ಉರಿದಾಗ ಲಾಭ ಮಾಡಿಕೊಂಡವರು..
1995ರಲ್ಲಿ ಅಂತರ್‌ರಾಷ್ಟ್ರೀಯ ವಿಜ್ಞಾನಿಗಳ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯು ಸಕಲ ವೈಜ್ಞಾನಿಕ ಆಧಾರಗಳೊಂದಿಗೆ ಈ ಕೆಲವು ಅಂಶಗಳನ್ನು ಜಗತ್ತಿನ ಮುಂದಿರಿಸಿತು:
 1. ಜಾಗತಿಕ ತಾಪಮಾನ ಕಳೆದ ಮೂರು ದಶಕಗಳಿಂದ ಒಂದೇ ಸಮನೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಭೂಮಿಯ ತಾಪಮಾನ 0.74ಡಿಗ್ರಿಯಷ್ಟು ಏರಿದೆ.
2. ಈ ತಾಪಮಾನ ಏರಿಕೆಗೆ ಪ್ರಧಾನ ಕಾರಣ ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈಯಾಕ್ಸೈಡ್‌ನಂತಹ ಹಸಿರು ಮನೆ ಅನಿಲಗಳು ಮತ್ತು ಅದರಿಂದ ಉಂಟಾಗುತ್ತಿರುವ ಹಸಿರು ಮನೆ ಪರಿಣಾಮ.
3. ವಾತಾವರಣದಲ್ಲಿ ಈ ಪ್ರಮಾಣದಲ್ಲಿ ಹಸಿರು ಮನೆ ಅನಿಲಗಳು ಹೆಚ್ಚಾಗಲು ಕಾರಣ ಅಭಿವೃದ್ಧಿ ಹೊಂದಿದ ದೇಶಗಳ ಕೈಗಾರಿಕಾ ಚಟುವಟಿಕೆಗಳು, ಕಲ್ಲಿದ್ದಲು, ಪೆಟ್ರೋಲಿಯಂನಂತಹ ಇಂಧನ ಬಳಕೆ ಮತ್ತು ಜಗತ್ತಿನ ಧಾರಣಾ ಶಕ್ತಿಯ ಪರಿವಿಲ್ಲದ ಅಭಿವೃದ್ಧಿ ಹೊಂದಿದ ದೇಶಗಳ ಜನತೆಯ ಜೀವನ ವಿಧಾನ.
4. ಭೂಮಂಡಲದ ವಾತಾವರಣದಲ್ಲಿರುವ ಹಸಿರುಮನೆ ಅನಿಲಗಳಲ್ಲಿ ಶೇ.80ರಷ್ಟು ಪಾಲು ಅಮೆರಿಕ, ಐರೋಪ್ಯ ಒಕ್ಕೂಟ, ಜಪಾನ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳದ್ದೇ ಆಗಿದೆ.
5. ಇನ್ನಾದರೂ ಈ ಹಸಿರುಮನೆ ಅನಿಲಗಳ ಉತ್ಪಾದನೆಯನ್ನು ಈ ಅಭಿವೃದ್ಧಿ ಹೊಂದಿದ ದೇಶಗಳು ಕಡಿಮೆ ಮಾಡಿಕೊಳ್ಳದೆ ಹೋದರೆ ಜಗತ್ತಿನ ತಾಪಮಾನ ಇನ್ನು ಐವತ್ತು ವರ್ಷಗಳಲ್ಲಿ 6 ಡಿಗ್ರಿಯಷ್ಟು ಏರುತ್ತದೆ. 6. ಇದರ ಪರಿಣಾಮವಾಗಿ ಸಾಗರದ ಮಟ್ಟ ಒಂದು ಮೀಟರ್‌ಗಿಂತಲೂ ಹೆಚ್ಚಾಗುತ್ತದೆ. ಸಾಗರದ ಮೇಲ್ಮೈ ತಾಪಮಾನ ಹೆಚ್ಚಾಗುತ್ತದೆ. ಇದರಿಂದಾಗಿ ಮಾಲ್ಡೀವ್ಸ್ ಇನ್ನಿತ್ಯಾದಿ ದೇಶಗಳು ಸಂಪೂರ್ಣವಾಗಿ ಮುಳುಗಿ ಹೋಗುತ್ತವೆ. ತಾಪಮಾನದ ಏರುಪೇರಿನಿಂದ ಹವಾಮಾನ ವೈಪರೀತ್ಯ ಸಂಭವಿಸುತ್ತದೆ. ನೆರೆ, ಪ್ರವಾಹ, ಸುನಾಮಿ, ಬರದ ಸಂಭವಗಳು ಹೆಚ್ಚಾಗುತ್ತವೆ.

7. ಭೂತಾಪಮಾನ ಏರಿಕೆಯಿಂದ ಕೃಷಿ ಹಾಳಾಗುತ್ತದೆ. ಹೀಗಾಗಿ ಅದನ್ನೇ ಆಧರಿಸಿದ ಬಡದೇಶಗಳ ಬಡಜನರ ಬದುಕಿನ ಮೇಲೆ ಪ್ರಭಾವ ಬೀರುತ್ತದೆ ಮತ್ತು ಸಾಗರ ತಾಪಮಾನ ಏರಿಕೆಯಿಂದಾಗಿ ಮೀನುಗಾರಿಕೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಹಲವಾರು ಹೊಸ ಖಾಯಿಲೆಗಳಿಗೂ ಈ ತಾಪಮಾನ ಏರಿಕೆ ಕಾರಣವಾಗುತ್ತದೆ. ಅಂತರ್‌ರಾಷ್ಟ್ರೀಯ ವಿಜ್ಞಾನಿಗಳ ಸಮಿತಿ ಅನುಮಾನಕ್ಕೆಡೆಯಿಲ್ಲದಂತೆ ರುಜುವಾತು ಪಡಿಸಿದಂತೆ ಜಾಗತಿಕ ತಾಪಮಾನ ಏರಿಕೆಗೆ ಬಂಡವಾಳಶಾಹಿ ದೇಶಗಳು ಕಾರಣವಾದರೂ ಅದರ ಪರಿಣಾಮವನ್ನು ಅನುಭವಿಸುತ್ತಿರುವವರು ಮಾತ್ರ ಬಡದೇಶಗಳು ಮತ್ತು ಶ್ರೀಮಂತ ದೇಶಗಳಲ್ಲಿರುವ ಬಡಜನರು! 1997ರಲ್ಲಿ ಜಪಾನಿನ ಕ್ಯೋಟೋದಲ್ಲಿ ಜಗತ್ತಿನ ರಾಷ್ಟ್ರಗಳೆಲ್ಲಾ ಈ ಅಪಾಯ ವನ್ನು ಪರಿಗಣಿಸಿ ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವ ಒಪ್ಪಂದಕ್ಕೆ ಸಹಿಹಾಕಿದವು. ಅಮೆರಿಕ ಹೊರತುಪಡಿಸಿ! ಅದಕ್ಕೆ ಅಮೆರಿಕ ಕೊಟ್ಟ ಕಾರಣ ಅದು ಅಮೆರಿಕದ ಹಿತಾಸಕ್ತಿಗೆ ಮತ್ತು ಅಲ್ಲಿನ ಜನರ ಜೀವನಶೈಲಿಯ ಹಿತಾಸಕ್ತಿಗೆ ವಿರುದ್ಧವಾಗಿದೆಯೆಂದು. ಅಷ್ಟು ಮಾತ್ರವಲ್ಲ. ಕ್ಯೋಟೋ ಒಪ್ಪಂದವನ್ನು ಸಾರಾಂಶದಲ್ಲಿ ಯಾವ ಬಂಡವಾಳಶಾಹಿ ದೇಶಗಳೂ ಮಾನ್ಯ ಮಾಡಲೇ ಇಲ್ಲ. ಬದಲಿಗೆ ಹೆಚ್ಚೆಚ್ಚು ವಿಷವನ್ನು ವಾತಾವರಣಕ್ಕೆ ಸೇರಿಸುತ್ತಲೇ ಹೋದವು. ಹೀಗಾಗಿಯೇ ವಿಶ್ವಸಂಸ್ಥೆ ಡೆನ್ಮಾರ್ಕಿನ ಕೋಪನ್‌ಹೆಗನ್‌ನಲ್ಲಿ ಜಗತ್ತಿನ ತಾಪಮಾನ ಕಡಿಮೆ ಮಾಡುವುದಕ್ಕೆ ಕಾನೂನುಬದ್ಧ ಒಪ್ಪಂದವನ್ನು ರೂಢಿಸಲು 2009ರ ಡಿಸೆಂಬರ್‌ನಲ್ಲಿ ವಿಶ್ವದ 193 ರಾಷ್ಟಗಳ ಸಮಾವೇಶವನ್ನು ಕರೆದಿತ್ತು.

1.5 ಡಿಗ್ರಿ ಏರಿಕೆಯೆಂದರೆ ...ಸರ್ವನಾಶ
ಈ ಸಮಾವೇಶ ಯಶಸ್ವಿಯಾಗಬೇಕಿದ್ದರೆ ಕನಿಷ್ಠ ಈ ಮೂರು ಒಪ್ಪಂದಗಳಿಗೆ ಜಗತ್ತಿನ ಎಲ್ಲಾ ದೇಶಗಳು ಒಪ್ಪಿಕೊಂಡು ಕಾನೂನುಬದ್ಧತೆಯುಳ್ಳ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು.
1. ಜಗತ್ತಿನ ತಾಪಮಾನವನ್ನು ಇನ್ನು 1.5 ಡಿಗ್ರಿಗಿಂತ ಹೆಚ್ಚಾಗದಂತೆ ತಡೆಹಿಡಿಯಲು ಕಾರ್ಯಸೂಚಿ.
2. ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಇಂಗಾಲದ ಹೊರಸೂಸುವಿಕೆಗೆ ಗರಿಷ್ಠ ಮಿತಿಯನ್ನು ಹಾಕಿಕೊಳ್ಳ ಬೇಕು. ಅದೇ ರೀತಿ ಇತರ ದೇಶಗಳು ಸಹ ತಮ್ಮ ಪಾಲು ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಇಂಗಾಲದ ಪ್ರಮಾಣದ ಗರಿಷ್ಠ ಮಿತಿಯನ್ನು ಹಾಕಿಕೊಳ್ಳಬೇಕು.
3. ಶ್ರೀಮಂತ ದೇಶಗಳು ಬಡದೇಶಗಳು ಸಹ ತಮ್ಮ ಇಂಗಾಲದ ಹೊರಸೂಸು ವಿಕೆಯ ಪ್ರಮಾಣತಡೆಗಟ್ಟಲು ಪರ್ಯಾಯ ತಂತ್ರಜ್ಞಾನವನ್ನು ಬಳಸಲು ಬೇಕಾದ ಹಣಕಾಸನ್ನು ಮುಂದಿನ 20 ವರ್ಷಗಳವರೆಗೆ ಅಂದಾಜು 100 ಬಿಲಿಯನ್‌ಡಾಲರಷ್ಟನ್ನು ಒದಗಿಸಬೇಕು. 4. ಅಮೆರಿಕ ಹಾಗೂ ಶ್ರೀಮಂತ ದೇಶಗಳು 2020ರೊಳಗೆ ತಮ್ಮ ಇಂಗಾಲದ ಪ್ರಮಾಣವನ್ನು 1990ರ ಪ್ರಮಾಣಕ್ಕೆ ಇಳಿಸಿಕೊಳ್ಳಬೇಕು.
5. ಈ ಒಪ್ಪಂದಕ್ಕೆ ಕಾನೂನುಬದ್ಧ ಮಾನ್ಯತೆಯನ್ನು ನೀಡಲು ಕೋಪನ್‌ಹೆಗನ್ ಸಮಾವೇಶದಲ್ಲಿ ಎಲ್ಲಾ ದೇಶಗಳು ಒಪ್ಪಿಕೊಳ್ಳಬೇಕು.
ಆದರೆ ಕೋಪನ್‌ಹೆಗನ್ ಸಮಾವೇಶದಲ್ಲಿ ಈ ದೇಶಗಳು ಈ ಯಾವ ಜವಾಬ್ದಾರಿಯನ್ನೂ ಒಪ್ಪಲಿಲ್ಲ. ಕೋಪನ್‌ಹೆಗನ್ ಸಮಾವೇಶ ಹತ್ತಿರಕ್ಕೆ ಬರುತ್ತಿದ್ದಂತೆ ಶ್ರೀಮಂತ ದೇಶಗಳು ಈವರೆಗಿನ ಇಂಗಾಲದ ಹೊರಸೂಸುವಿಕೆಯ ಪ್ರಮಾಣದಲ್ಲಿ ಯಾರ ಪಾಲು ಎಷ್ಟೇ ಇದ್ದರೂ ಎಲ್ಲರೂ ಸಮಾನವಾಗಿಯೇ ತಮ್ಮ ತಮ್ಮ ಇಂಗಾಲದ ಇಳಿಕೆ ಮಿತಿಯನ್ನು ಹಮ್ಮಿ ಕೊಳ್ಳಬೇಕೆಂದು ರಾಗಹಾಡತೊಡಗಿದವು. ಅಂದರೆ ಇಂದು ಅಮೆರಿಕಕ್ಕೆ ಹೋಲಿಸಿದಲ್ಲಿ ಭಾರತದ ಆರ್ಥಿಕತೆ ಅದರ ಶೇ.10ರಷ್ಟೂ ಇಲ್ಲ. ಹೀಗಾಗಿಯೇ ಇಂಗಾಲ ಹೊರ ಸೂಸುವಿಕೆಯಲ್ಲಿ ಅಮೆರಿಕದ ಪಾಲು ಶೇ.24ರಷ್ಟಿದ್ದರೆ ಭಾರತದ ಪಾಲು ಕೇವಲ ಶೇ.4. ಹೀಗಾಗಿ ತಾಪಮಾನ ಕಡಿಮೆಯಾಗಬೇಕಿದ್ದರೆ ಸಹಜವಾಗಿಯೇ ಅಮೆರಿಕ ತನ್ನ ಅಭಿವೃದ್ಧಿ ಚಟುವಟಿಕೆಗಳನ್ನು ಭಾರತಕ್ಕಿಂತ ಹತ್ತುಪಟ್ಟು ಕಡಿಮೆ ಮಾಡಿ ಕೊಳ್ಳಬೇಕು. ಆದರೆ ಅಮೆರಿಕವು ಭಾರತ, ಚೀನಾ ಇನ್ನಿತ್ಯಾದಿ ದೇಶಗಳು ಸಹ ತಮ್ಮಷ್ಟೇ ಇಂಗಾಲ ಇಳಿಕೆ ಮಾಡಬೇಕೆಂದು ಹಠ ಹಿಡಿಯಿತು. ಶ್ರೀಮಂತ ದೇಶಗಳ ಹಾಗೂ ಲಾಭಕೋರ ಬಹುರಾಷ್ಟ್ರೀಯ ಕಂಪೆನಿಗಳ ಲಾಭಕೋರತನದಿಂದಾಗಿ ಇಡೀಜಗತ್ತು ಹಿಂದೆಂದೂ ಕೇಳರಿಯದ ಪರಿಸರ ಏರುಪೇರುಗಳನ್ನು ಅನುಭವಿಸುತ್ತಿದ್ದಂತೆ 2015ರಲ್ಲಿ ಪ್ಯಾರಿಸ್ ಸಮ್ಮೇಳನ ನಡೆಯಿತು.

ಶ್ರೀಮಂತ ದೇಶಗಳು ನುಂಗಿಹಾಕಿದ ಕಾರ್ಬನ್ ಬಜೆಟ್
ಪ್ಯಾರಿಸ್ ಸಮ್ಮೇಳನ ನಡೆಯುವ ವೇಳೆಗೆ ಭೂಮಿಯ ತಾಪಮಾನ 1850ರ ಕೈಗಾರಿಕಾ ಕ್ರಾಂತಿಯ ಪೂರ್ವಕ್ಕೆ ಹೋಲಿಸಿದಲ್ಲಿ 13.5 ಡಿಗ್ರಿ ಸೆಂಟಿಗ್ರೇಡಿನಿಂದ 14.5 ಡಿಗ್ರಿಗೆ ಅಂದರೆ 1 ಡಿಗ್ರಿಯಷ್ಟು ಹೆಚ್ಚಾಗಿತ್ತು. ಇದಕ್ಕೆ ಕಾರಣ 1850ರಲ್ಲಿ ಇಂಗಾಲದ ಹೊರ ಸೂಸುವಿಕೆ 275 ಪಿಪಿಎಂ ಇದ್ದದ್ದು 400 ಪಿಪಿಎಂಗೆ ಏರಿತ್ತು. ಹೀಗೆ ತಾಪಮಾನ ಏರುತ್ತಾ ಹೋದಲ್ಲಿ 2040ರ ವೇಳೆಗೆ ಜಾಗತಿಕ ತಾಪಮಾನ 1850ಕ್ಕಿಂತ 3-4 ಡಿಗ್ರಿಯಷ್ಟು ಹಚ್ಚಾಗುವ ಎಲ್ಲಾ ಸಾಧ್ಯತೆಗಳು ಇವೆಯೆಂಬುದು ನಿಚ್ಚಳವಾಗಿತ್ತು. ಈಗಾಗಲೇ ಈ ಹವಾಮಾನ ವೈಪರೀತ್ಯದಿಂದಾಗಿ ಜಗತ್ತಿನ ಶೀತ ಪ್ರದೇಶದಲ್ಲೂ ಬಿರುಬಿಸಿಲು, ಒಣನಾಡಿನಲ್ಲಿ ಪ್ರವಾಹ, ಚಂಡಮಾರುತ, ಅಕಾಲಿಕ ಮತ್ತು ದೀರ್ಘಕಾಲಿಕ ಸೈಕ್ಲೋನ್, ಸುನಾಮಿ, ದ್ವೀಪ ರಾಷ್ಟ್ರಗಳ ಪ್ರಾಯಶಃ ಮುಳುಗಡೆ, ಧ್ರುವ ಪ್ರದೇಶಗಳ ಹಿಮಗಡ್ಡೆಗಳ ಕುಸಿತ, ಸಮುದ್ರದ ಮೇಲ್ಮೈ ತಾಪಮಾನ ಹೆಚ್ಚಳದಿಂದ ಸಮುದ್ರ ಜೀವಿಗಳ ಸಾಮೂಹಿಕ ಸಾವು, ಕೃಷಿ ವೈಪರೀತ್ಯ, ಹೊಸ ಕಾಯಿಲೆಗಳು ಕಾಣತೊಡಗಿವೆ. ಜಾಗತಿಕ ತಾಪಮಾನ 1850ಕ್ಕಿಂತ ಇನ್ನು 2 ಡಿಗ್ರಿ ಹೆಚ್ಚಾದರೂ ಈ ವಿನಾಶಕಾರಿ ಬೆಳವಣಿಗೆಗಳು ಇನ್ನೂ ಎರಡು ಪಟ್ಟು ಹೆಚ್ಚಾಗಲಿವೆ. ಹೀಗಾಗಿ ಜಾಗತಿಕ ತಾಪಮಾನವು ಶತಾಯಗತಾಯ 1850ಕ್ಕಿಂತ 1.5 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಾಗದಂತೆ ನೋಡಿಕೊಳ್ಳುವ ತುರ್ತನ್ನು ಇಂದು ಜಗತ್ತು ಎದುರಿಸುತ್ತಿದೆ.

ಹಾಗೆ ಮಾಡಬೇಕೆಂದರೆ 1850ಕ್ಕೆ ಹೋಲಿಸಿದಲ್ಲಿ ಜಗತ್ತು ಹೆಚ್ಚೆಂದರೆ 1 ಲಕ್ಷ ಕೋಟಿ ಟನ್ ಕಾರ್ಬನ್ ಅನ್ನು ಮಾತ್ರ ಹೊರ ಹಾಕಬಹುದು. ಇದನ್ನು ಕಾರ್ಬನ್ ಬಜೆಟ್‌ಎಂದು ಕರೆಯಲಾಗುತ್ತದೆ. ಆದರೆ 2021ರ ವೇಳೆಗೆ ಜಗತ್ತು ಅದರಲ್ಲಿ ಶೇ. 86ರಷ್ಟನ್ನು ಬಳಸಿ ಆಗಿದೆ. ಅದರಲ್ಲಿ ಸಿಂಹಪಾಲು ಅಮೆರಿಕ, ಕೆನಡ ಹಾಗೂ ಪಶ್ಚಿಮ ಯುರೋಪ್, ಜಪಾನ್, ಚೀನಾ ಮತ್ತು ಭಾರತದ್ದು. ಕೇವಲ 20 ಕಲ್ಲಿದ್ದಲು, ತೈಲ ಮತ್ತು ಅನಿಲ ಬಹುರಾಷ್ಟ್ರೀಯ ಕಂಪೆನಿಗಳೇ ಶೇ. 70ರಷ್ಟು ವಾರ್ಷಿಕ ಜಾಗತಿಕ ಕಾರ್ಬನ್ ಮಾಲಿನ್ಯವನ್ನು ಮಾಡುತ್ತವೆ. ಅಂತಹ ಕಂಪೆನಿಗಳೇ ಈ COP ಸಮ್ಮೇಳನಗಳಿಗೆ ಹಣಕಾಸನ್ನು ಕೂಡಾ ಪೂರೈಸುತ್ತವೆ.

ಹೀಗಾಗಿ, ಒಟ್ಟಾರೆ ಜಗತಿಕ ತಾಪಮಾನ 1.5 ಡಿಗ್ರಿಗಿಂತ ಜಾಸ್ತಿಯಾಗದಂತೆ ನೋಡಿಕೊಳ್ಳಲು ಜಗತ್ತಿನ 200 ದೇಶಗಳ ಸರಕಾರಗಳು ಅದರಲ್ಲೂ ಶ್ರೀಮಂತ ದೇಶಗಳು ಮತ್ತು ಭಾರತ ಮತ್ತು ಚೀನಾ ದೇಶಗಳ ಸರಕಾರಗಳು, ಜವಾಬ್ದಾರಿ ವಹಿಸಿಕೊಳ್ಳುವ, ತುರ್ತು ಯೋಜನೆ-ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ಅದಕ್ಕೆ ಬೇಕಾದ ಹಣಕಾಸಿನ ವಿಷಯಗಳನ್ನು ಗಂಭೀರವಾಗಿ ಚರ್ಚಿಸಬೇಕಿತ್ತು. ಅಂದರೆ ಅತಿ ಹೆಚ್ಚು ಇಂಗಾಲವನ್ನು ಹೊರಸೂಸುತ್ತಿರುವ ದೇಶಗಳು ಅದಕ್ಕೆ ಕಾರಣವಾದ ಕಲ್ಲಿದ್ದಲು, ಅನಿಲ ಮತ್ತು ತೈಲ ಬಳಕೆಗಳನ್ನು ಹೇಗೆ ನಿಗ್ರಹಿಸುತ್ತವೆ ಮತ್ತು ಅದಕ್ಕೆ ಪರ್ಯಾಯವಾಗಿ ಏನನ್ನು ಮಾಡಲಿವೆ? ಶ್ರೀಮಂತ ದೇಶಗಳು ಕಬಳಿಸಿರುವ ಇಂಗಾಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ದ್ವೀಪ ದೇಶಗಳ ಪುನರ್ವಸತಿ ಮರು ಪರಿಹಾರವೇನು? ಇನ್ನು ಅಭಿವೃದ್ಧಿಯನ್ನೇ ಕಾಣದಿರುವ ಬಡದೇಶಗಳ ಇಂಧನದ ಅಗತ್ಯಗಳಿಗೆ ಬದಲಿ ತಂತ್ರಜ್ಞಾನವನ್ನು ಪೂರೈಸಲು ಬೇಕಿರುವ ಪರಿಸರ ಹಣಕಾಸು ವ್ಯವಸ್ಥೆಯ ಬಗ್ಗೆ ಶ್ರೀಮಂತ ದೇಶಗಳು ತಮ್ಮ ಬದ್ಧತೆಯನ್ನು ತೋರಬೇಕಿತ್ತು.

ಗ್ಲಾಸ್ಗೋ ಸಮ್ಮೇಳನ ಮತ್ತು ಹುಸಿಬಿಸಿ ಘೋಷಣೆಗಳು
ಆದರೆ ಕ್ಯೋಟೋ, ಕೋಪನ್‌ಹೇಗನ್ ಮತ್ತು ಪ್ಯಾರಿಸ್ ಸಮ್ಮೇಳನದಲ್ಲಿ ಆದಂತೆ ಗ್ಲಾಸ್ಗೋದಲ್ಲೂ ಶ್ರೀಮಂತ ದೇಶಗಳು ತಮ್ಮ ದೇಶಗಳ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಮಾತುಗಳ ತಂತ್ರವನ್ನು ಬಳಸಿದವೇ ವಿನಾ ಭೂಮಿಯ ರಕ್ಷಣೆಗೆ ಮುಂದಾಗಲಿಲ್ಲ. 2020ರ ವೇಳೆಗೆ ಶ್ರೀಮಂತ ದೇಶಗಳು ತಮ್ಮ ಇಂಗಾಲ ತ್ಯಾಜ್ಯಗಳನ್ನು 2010ರ ಪ್ರಮಾಣಕ್ಕೆ ಇಳಿಸಬೇಕಿತ್ತು. ಅದರ ಬದಲಿಗೆ ಅವುಗಳ ಪ್ರಮಾಣ 2020ರಲ್ಲಿ ಶೇ. 14ರಷ್ಟು ಹೆಚ್ಚಾಗಿದೆ. ಹೀಗಾಗಿ 2030ರ ವೇಳೆಗಾದರೂ ಅದನ್ನು ಶೇ. 50ರಷ್ಟು ಇಳಿಸದಿದ್ದರೆ ಜಾಗತಿಕ ತಾಪಮಾನದ ಹೆಚ್ಚಳ 1.5 ಡಿಗ್ರಿಗೆ ಸೀಮಿತವಾಗುವುದಿರಲಿ, ಕನಿಷ್ಠ 2.7 ಡಿಗ್ರಿಯಷ್ಟು ಹೆಚ್ಚಾಗಲಿದೆ. ಆದರೆ ಅಮೆರಿಕ, ಕೆನಡಾ, ಐರೋಪ್ಯ ಒಕ್ಕೂಟ ಮತ್ತು ಜಪಾನ್‌ಗಳು 2050ರ ವೇಳೆಗೆ ತಮ್ಮ ಇಂಗಾಲವನ್ನು ಶೇ. 50ರಷ್ಟು ಇಳಿಸುವುದಾಗಿ ಘೋಷಿಸಿ ಬೇಜವಾಬ್ದಾರಿ ಮತ್ತು ಉಡಾಫೆಯನ್ನು ತೋರಿದವು. ಮತ್ತೊಂದು ಕಡೆ ಕಲ್ಲಿದ್ದಲು, ಅನಿಲಕ್ಕೆ ಪರ್ಯಾಯವಾದ ಇಂಧನ ಬಳಕೆಯ ಬಗ್ಗೆ ಯಾವ ನಿಶ್ಚಿತ ಯೋಜನೆಗಳನ್ನು ಗ್ಲಾಸ್ಗೋ ಸಮ್ಮೇಳನ ಘೋಷಿಸಲಿಲ್ಲ. ಕಲ್ಲಿದ್ದಲ ಬಳಕೆ ಇಂಗಾಲದ ತ್ಯಾಜ್ಯದ ಬಹುಮುಖ್ಯ ಮೂಲ ಎಂದು ಮೊತ್ತ ಮೊದಲ ಬಾರಿಗೆ ಒಪ್ಪಿಕೊಂಡರೂ ‘ಅವುಗಳ ಬಳಕೆಯನ್ನು ನಿಲ್ಲಿಸುವ’ (ಛಿ ಟ್ಠಠಿ) ಘೋಷಣೆ ಮಾಡುವ ಬದಲಿಗೆ ‘ನಿಧಾನವಾಗಿ ಕಡಿಮೆ ಮಾಡುವ’ (Phase down) ಘೋಷಣೆ ಮಾಡಿ ಭೂಮಿಯ ಆರೋಗ್ಯದ ಜೊತೆ ರಾಜಿ ಮಾಡಿಕೊಂಡಿತ್ತು. ಇನ್ನು ಈಗಾಗಲೇ ಆಗಿರುವ ಹಾನಿಯನ್ನು ನಿವಾರಿಸುವ ಮತ್ತು ಹೊಸ ಸಂದರ್ಭದ ಅಳವಡಿಕೆಗೆ ಬೇಕಾದ ತಂತ್ರಜ್ಞಾನ ಮತ್ತು ಯೋಜನೆಗಳಿಗೆ ಸಂಬಂಧಪಟ್ಟ ‘ಪರಿಸರ ಹಣಕಾಸು’ ಪ್ರಸ್ತಾಪದ ಬಗ್ಗೆ ಶ್ರೀಮಂತ ದೇಶಗಳು ಮುಂದಿನ ವರ್ಷಗಳಲ್ಲಿ ‘ಯೋಚಿಸುವ’ ಭರವಸೆ ಮಾತ್ರ ನೀಡಿದವು. ಸಮ್ಮೇಳನದ ಪ್ರಾರಂಭದಲ್ಲಿ ಜಾಗತಿಕ ತಾಪಮಾನದ ಏರಿಕೆ 1.5 ಡಿಗ್ರಿಗಿಂತ ಕಡಿಮೆ ಪ್ರಮಾಣದಲ್ಲಿ ಇಟ್ಟುಕೊಳ್ಳಲು ದೇಶಗಳು ಹಾಕಿಕೊಂಡಿರುವ ಗುರಿಗಳು ಸಮಾಧಾನಕರವಾಗಿಲ್ಲ ಎಂದು ಚರ್ಚಿಸಿದರೂ ಯಾವ ಹೊಸ ಗುರಿಗಳೂ ಘೋಷಣೆಯ ಭಾಗವಾಗಲಿಲ್ಲ. ಹೀಗಾಗಿ ಮತ್ತೊಮ್ಮೆ ಕಾರ್ಪೊರೇಟ್ ಹಿತಾಸಕ್ತಿಗಳೇ ಭೂಮಿಯ ಹಾಗೂ ಬಡವರ ಹಿತಾಸಕ್ತಿಯನ್ನು ನುಂಗಿಹಾಕಿದವು.

ಮೋದಿ ಸರಕಾರದ ಬಡಾಯಿ ಮತ್ತು ಬೇಜವಾಬ್ದಾರಿ
ಇಡೀ ಗ್ಲಾಸ್ಗೋ ಸಮ್ಮೇಳನದಲ್ಲಿ ಹೊಸ ಭರವಸೆಗಳನ್ನು ಹುಟ್ಟಿಸಿದ್ದು ಮೋದಿಯವರ ಭಾಷಣ ಮತ್ತು ಘೋಷಣೆಗಳು! ಪ್ರಧಾನಿ ಮೋದಿಯವರು ತಮ್ಮ ಅಧಿಕಾರಿಗಳಿಗೂ ಸೂಚನೆ ಕೊಡದೆ ಸಮ್ಮೇಳನದಲ್ಲಿ ಹಲವಾರು ಘೋಷಣೆಗಳನ್ನು ಮಾಡಿದರು. ಅದರಲ್ಲಿ 2030ರ ವೇಳೆಗೆ ಭಾರತವು ತನ್ನ ಇಂಗಾಲದ ಹೊರಸೂಸುವಿಕೆಯನ್ನು ನೂರು ಕೋಟಿ ಟನ್ನಿನಷ್ಟು ಕಡಿಮೆ ಮಾಡುವ, 2030ರ ವೇಳೆಗೆ ತನ್ನ ಇಂಧನದ ಶೇ. 50ರಷ್ಟನ್ನು ತೈಲ ಮತ್ತು ಕಲ್ಲಿದ್ದಲೇತರ ಮೂಲಗಳಿಂದ ಸಾಧಿಸುವ, ತನ್ನ ಅಭಿವೃದ್ಧಿಯಲ್ಲಿನ ಇಂಗಾಲ ತೀವ್ರತೆಯನ್ನು ಶೇ. 45ರಷ್ಟಕ್ಕೆ ಇಳಿಸುವ ಮತ್ತು 2070ರ ವೇಳೆಗೆ ಒಟ್ಟಾರೆಯಾಗಿ ಇಂಗಾಲದ ಹೊರ ಸೊಸುವಿಕೆಯನ್ನು ಪರಿಣಮಕಾರಿಯಾಗಿ ಶೂನ್ಯಕ್ಕೆ ಇಳಿಸುವ ಭರವಸೆಗಳಿದ್ದವು. ಇದರಿ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News