ಸ್ವರ್ಗವನ್ನು ಅಸ್ಪೃಶ್ಯತೆಯ ನರಕವನ್ನಾಗಿಸಿದರು

Update: 2021-11-16 19:30 GMT

ಮಾನ್ಯರೇ,

ದಿನಾಂಕ 15ರ 'ವಾರ್ತಾಭಾರತಿ'ಯಲ್ಲಿ 'ಕಾಸರಗೋಡಿನ ಸ್ವರ್ಗದಲ್ಲಿ ಅಸ್ಪೃಶ್ಯತೆಯ ನರಕ' ಸುದ್ದಿ ಓದಿದೆ.
ಮೋಹನ ಕೃಷ್ಣ, ಶ್ರೀನಿವಾಸ ನಾಯ್ಕ ಇವರ ಹೇಳಿಕೆ ಮತ್ತು ಹಂಬಲಿಕೆ ಅತ್ಯಂತ ನ್ಯಾಯೋಚಿತ ಹಾಗೂ ಅವರಿಂದ ಯಾವುದೇ ಅನುಚಿತ ವರ್ತನೆ ನಡೆದಿಲ್ಲ. ಆಡಳಿತ ಮಂಡಳಿಯ ಸದಸ್ಯರು ಅವರ ದುಃಖ ದುಮ್ಮಾನಗಳನ್ನು ಅರ್ಥೈಸಿಕೊಂಡು ಪರಿಹರಿಸಿಕೊಳ್ಳಬೇಕಿತ್ತು. ಆದರೆ ದೌರ್ಭಾಗ್ಯದ ಸಂಗತಿಯೆಂದರೆ ಅವರು ಎಲ್ಲರನ್ನೂ ಸೇರಿಸಿದ ನಾಟಕ ಮಾಡಿ ಏಕಾಏಕಿ ಅಲ್ಲಿ ನಡೆಯುತ್ತಿದ್ದ ಮಹಿಮೆ ಮತ್ತು ಅನ್ನದಾನವನ್ನು ಮೂರು ವರ್ಷಗಳ ಹಿಂದೆ ನಿಲ್ಲಿಸಿ ಊರ ಜನರ ಭಾವನೆಗಳನ್ನು ಘಾಸಿ ಮಾಡಿದ್ದಾರೆ.

ಜಟಾಧಾರಿ ದೈವದ ಮಹಿಮೆಯು ಊರ ಸಮಸ್ತರನ್ನೂ ಏಕ ಸೂತ್ರದಲ್ಲಿ ಬೆಸೆದು ಎಲ್ಲ ಜನರ ಜೀವನದಲ್ಲಿ ನೆಮ್ಮದಿ, ಶಾಂತಿ, ಸಮಾಧಾನವನ್ನು ಒದಗಿಸಿತ್ತು. ಕಾಲಾಂತರಗಳಲ್ಲಿ ಬಂದ ಸಾಮಾಜಿಕ ಬದಲಾವಣೆಗಳನ್ನು ಯೋಗ್ಯ ರೀತಿಯಲ್ಲಿ ಅಳವಡಿಸಿಕೊಂಡಿದ್ದರೆ ಇಂದಿನ ಈ ದಯನೀಯ ಸ್ಥಿತಿ ಬರುತ್ತಿರಲಿಲ್ಲ. ಈಗಲೂ ಸಾಮಾಜಿಕ ಪಿಡುಗಾದ ಅಸ್ಪೃಶ್ಯತೆಯನ್ನು ತಲೆ ಮೇಲೆ ಹೊಡೆದಂತೆ ಸಾಮಾಜಿಕ ಸ್ಥಳಗಳಲ್ಲಿ ಆಚರಿಸುವುದು ನಮ್ಮ ಬುದ್ಧಿಗಂಟಿದ ಮೌಢ್ಯ ಎನ್ನೋಣವೇ? ಬ್ರಾಹ್ಮಣ್ಯದ ದರ್ಪ ಎನ್ನೋಣವೇ? ಅಥವಾ ಅವಿವೇಕದ ಪರಮಾವಧಿ ಎನ್ನೋಣವೇ?

ಹೆಚ್ಚು ಕಡಿಮೆ ಎಂಟುನೂರು ಮನೆಗಳಿರುವ ಪಡ್ರೆ ಗ್ರಾಮದ ಎಲ್ಲಾ ಜಾತಿ, ಪಂಗಡ, ಸಿರಿವಂತ, ಬಡವ, ವಿದ್ಯಾವಂತ, ಹಿಂದುಳಿದವರು, ಕೃಷಿಕರು, ವ್ಯಾಪಾರಸ್ಥರು, ಕೂಲಿಕೆಲಸದವರು, ಉದ್ದಿಮೆದಾರರು, ಮೇಲ್ಜಾತಿ, ನಡುಜಾತಿ, ಕೆಳಜಾತಿ, ನಿಮ್ನವರ್ಗ, ಕೆಳವರ್ಗ ಹೀಗೆ ಎಲ್ಲರನ್ನೂ ಒಂದು ಸೂತ್ರದಲ್ಲಿ ಬಂಧಿಸಿ ಎಲ್ಲರಿಂದಲೂ ಅವರವರ ಅರ್ಹತೆಯ ಮೇಲೆ ಜವಾಬ್ದಾರಿ ಕೆಲಸಗಳನ್ನು ಮಾಡಿಸುತ್ತಾ ಶತಮಾನಗಳಿಂದ ನಡೆದು ಬಂದ ಈ ಜಟಾಧಾರಿ ದೈವದ ಮಹಿಮೆ ಎಲ್ಲರ ಜೀವನದಲ್ಲೂ ವಿಶ್ವಾಸದ ಆಸರೆಯಾಗಿತ್ತು. ದೈವ ನಮ್ಮನ್ನು ನಿರಂತರ ರಕ್ಷಣೆ ಮಾಡಿ ನಮ್ಮ ಭವಿಷ್ಯ ಭದ್ರ ಮಾಡುತ್ತದೆ ಎಂಬ ನಂಬಿಕೆ ಈ ಆಚರಣೆಯಲ್ಲಿ ಕಾಣಬಹುದಿತ್ತು. ಈಗ ಕ್ಷುಲ್ಲಕ ಕಾರಣಗಳಿಗಾಗಿ ಈ ವ್ಯವಸ್ಥೆಯನ್ನು ಸ್ತಂಭನಗೊಳಿಸಿದ್ದು ಆಡಳಿತದ ವೈಫಲ್ಯ. ಇದು ಸಾಮಾಜಿಕ ಅವ್ಯವಸ್ಥೆಗೆ ಕಾರಣವಾಗಬಹುದು. ಪರಸ್ಪರ ವೈಷಮ್ಯಕ್ಕೆ ಕಾರಣವಾಗಬಹುದು.

ವಿಶಾಲ ಮನೋಭಾವದಿಂದ ಪರಿಹರಿಸಲು ಸಾಧ್ಯವಿದ್ದ ಈ ಪ್ರಕರಣ ಈಗ ಕಗ್ಗಂಟಾಗಿದೆ. ಯಾವ ಸಮಸ್ಯೆ ಇದ್ದರೂ ಹೊಂದಾಣಿಕೆಯಿಂದ ಪರಿಹಾರ ಸಾಧ್ಯ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಒಳ್ಳೆಯ ಮನಸ್ಸಿನಿಂದ ಪ್ರಯತ್ನಿಸಿದರೆ ಇದು ಸಾಧ್ಯವಾಗಬಹುದು.
 

Writer - - ಸ್ಥಳೀಯ ನಿವಾಸಿ

contributor

Editor - - ಸ್ಥಳೀಯ ನಿವಾಸಿ

contributor

Similar News