ಬಿಟ್ ಕಾಯಿನ್ ಹಗರಣ: ತಪ್ಪಿತಸ್ಥರ ವಿರುದ್ಧ ಪ್ರಧಾನಿ ಮೋದಿ ಕ್ರಮ ಕೈಗೊಳ್ಳಲಿದ್ದಾರೆ ಎಂದ ಯಡಿಯೂರಪ್ಪ

Update: 2021-11-18 12:35 GMT

ಬೆಂಗಳೂರು/ಹುಬ್ಬಳ್ಳಿ: "ಬಿಟ್ ಕಾಯಿನ್ ಹಗರಣದಲ್ಲಿ ಆರೋಪಿ ಶ್ರೀಕೃಷ್ಣ ಯಾನೆ ಶ್ರೀಕಿ ಸೇರಿದಂತೆ ಯಾರೇ ಭಾಗಿಯಾಗಿದ್ದರೂ ತಪ್ಪಿತಸ್ಥರ ವಿರುದ್ಧ ಪ್ರಧಾನಿ ಮೋದಿಯವರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ಹುಬ್ಬಳ್ಳಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲೆ ಇದ್ದರೆ ತನಿಖಾ ಸಂಸ್ಥೆಗಳಿಗೆ ಕೊಡಲಿ. ಯಾವುದೇ ಪಕ್ಷದವರು ಕೊಟ್ಟರೂ ಕಾನೂನು ರೀತಿಯಲ್ಲಿ ತನಿಖಾ ಸಂಸ್ಥೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ" ಎಂದು ವಿವರಣೆ ನೀಡಿದರು.

ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಬಡಿದಾಟ ಆರಂಭವಾಗಿದ್ದು, ಈಗಾಗಲೇ ಎರಡು ಬಣಗಳಿವೆ. ಕಾಂಗ್ರೆಸ್ ಬಡಿದಾಟದ ಕುರಿತು ನಾನು ಟೀಕೆ-ಟಿಪ್ಪಣಿ ಮಾಡುವುದಕ್ಕೆ ಹೋಗುವುದಿಲ್ಲ. ಪ್ರತಿಪಕ್ಷದವರ ವಿರುದ್ಧ ಹೇಳಿಕೆ ನೀಡುವುದಿಲ್ಲ. ಅವರೇನು ಎಂದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಗೊತ್ತಾಗಲಿದೆ ಎಂದು ಯಡಿಯೂರಪ್ಪ ನುಡಿದರು.

ಅಕಾಲಿಕ ಮಳೆಯಿಂದ ಆಗಿರುವ ಬೆಳೆ ಹಾನಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಅಧಿಕಾರಿಗಳಿಗೆ ನಷ್ಟದ ಸಮೀಕ್ಷೆ ಮಾಡಲು ಸೂಚಿಸಿದ್ದಾರೆ. ಎಲ್ಲಿ ಬೆಳೆ ನಾಶವಾಗಿದೆಯೋ ಪರಿಹಾರ ಕೊಡುವುದಕ್ಕೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News