ಸಂಗೀತ ನಿರ್ದೇಶಕ ಹಂಸಲೇಖ ಅವರ ಕುರಿತ ಟೀಕೆ ಸಮಂಜಸವಲ್ಲ: ಎಚ್. ವಿಶ್ವನಾಥ್

Update: 2021-11-18 13:36 GMT
ಎಚ್. ವಿಶ್ವನಾಥ್

ಮೈಸೂರು: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಕುರಿತು ಟೀಕೆಗಳು ಸಮಂಜಸವಲ್ಲ, ಅವರು ಕ್ಷಮೆಯಾಚಿಸಿದ್ದು ಇದಕ್ಕೆ ಇತಿಶ್ರೀ ಆಡಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮನವಿ ಮಾಡಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಂಸಲೇಖ ಯಾವ ಕಾರಣಕ್ಕೆ ಪೇಜಾವರಶ್ರೀ ಕುರಿತು ಟೀಕೆ ಮಾಡಿದರೊ ಗೊತ್ತಿಲ್ಲ, ಆದರೆ ಇದಕ್ಕೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ. ಆದರೆ ಕೆಲವು ಹುಸಿ ಬುದ್ದಿಜೀವಿಗಳು ಇದನ್ನು ದೊಡ್ಡದು ಮಾಡುತ್ತಿರುವುದು ತರವಲ್ಲ ಎಂದು ಹೇಳಿದರು.

ಹಂಸಲೇಖ ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದವರು. ತಮ್ಮ ಗೀತೆ ರಚನೆ ಮೂಲಕ ಸಾಂಸ್ಕೃತಿಕ ಲೋಕವನ್ನು ಬಹಳ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅವರ ಬಗ್ಗೆ ಟೀಕೆ, ಅಪಪ್ರಚಾರ ಸರಿಯಲ್ಲ. ಅವರು ತಮ್ಮ ಸಂಗೀತದ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಹಲವಾರು ಗೀತೆಗಳನ್ನು ನಾಡಿಗೆ ನೀಡುವ ಮೂಲಕ ಸಾಂಸ್ಕೃತಿಕ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಹಂಸಲೇಖ ಕುರಿತು ಟೀಕೆಗಳನ್ನು ಈ ಕೂಡಲೇ ನಿಲ್ಲಿಸಬೇಕು, ಪೇಜಾವರ ಶ್ರೀಗಳು ನಿಧನರಾಗಿದ್ದಾರೆ. ಅವರು ಬದುಕಿದ್ದರೆ ಇಂತಹ ಟೀಕೆಗಳನ್ನು ಅವರು ಸಹಿಸುತ್ತಿರಲಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News