ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ: ಸಚಿವ ಈಶ್ವರಪ್ಪ

Update: 2021-11-18 14:03 GMT


"ನರೇಗಾ ಮೂಲಕ ಗ್ರಾಪಂ ಮಟ್ಟದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸಲು ಮೋದಿ ಸಂಕಲ್ಪ"
-
ಚಿಕ್ಕಮಗಳೂರು, ನ.18: ಪಕ್ಷದ ಸಂಘಟನೆ ಹಾಗೂ ಕೇಂದ್ರ, ರಾಜ್ಯ ಸರಕಾರಗಳ ಸಾಧನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದಾದ್ಯಂತ 4 ತಂಡಗಳು ಜನ್‌ಸ್ವರಾಜ್ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆ ಮೂಲಕ ಮುಂದಿನ ತಾಪಂ, ಜಿಪಂ ಸೇರಿದಂತೆ ವಿಧಾನಸಭೆ ಚುನಾವಣೆ ಎದುರಿಸಲು ಪಕ್ಷ ಸಂಘಟನೆ ಮಾಡಲಾಗುವುದು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲುವ ಗುರಿ ಹೊಂದಿದ್ದು, ಜನಸ್ವರಾಜ್ ಯಾತ್ರೆ ಮೂಲಕ ಇದನ್ನು ಸಾಕಾರ ಮಾಡಲು ಶ್ರಮಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳ ಜನಪರ ಯೋಜನೆಗಳಿಂದಾಗಿ ಬಿಜೆಪಿ ಪಕ್ಷದ ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ವಿಧಾನಸಭೆ, ವಿಧಾನಪರಿಷತ್, ಸಂಸತ್ ಚುನಾವಣೆಗಳಲ್ಲಿ ಭಾರೀ ಗೆಲುವು ಸಾಧಿಸಿ ಎಲ್ಲೆಡೆ ಅಧಿಕಾರದ ಗದ್ದುಗೆ ಹಿಡಿಯುತ್ತಿದೆ. ಇದನ್ನು ಸಹಿಸಲಾಗದ ವಿರೋಧ ಪಕ್ಷಗಳಿಗೆ ಉದ್ಯೋಗವಿಲ್ಲದಂತಾಗಿದ್ದು, ಸುಳ್ಳು ಆರೋಪಗಳ ಮೂಲಕ ಜನರಲ್ಲಿ ಅಪಪ್ರಚಾರ ಮಾಡುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿವೆ ಎಂದು ಟೀಕಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಡಳಿತದಿಂದಾಗಿ ರಾಜ್ಯದ ಗ್ರಾಮೀಣ ಭಾಗದಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಆಗುತ್ತಿದೆ ಎಂದ ಅವರು, ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನರೇಗಾ ಯೋಜನೆ ಮೂಲಕ ಗ್ರಾಮ ಪಂಚಾಯತ್‌ಗಳಿಗೆ ಅತೀ ಹೆಚ್ಚು ಅನುದಾನ ಒದಗಿಸಿದ್ದಾರೆ. ಈ ಯೋಜನೆಯಡಿಯಲ್ಲಿ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳ ಗುರಿಯನ್ನು 2022ರ ಮಾರ್ಚ್ ಒಳಗೆ ಮುಟ್ಟಬೇಕಿತ್ತು. ಆದರೆ ರಾಜ್ಯ ಸರಕಾರ ನವೆಂಬರ್ ತಿಂಗಳೊಳಗೆ ಈ ಗುರಿಯನ್ನು ತಲುಪಿ ಸಾಧನೆ ಮಾಡಿದೆ. ಸರಕಾರದ ಮನವಿ ಮೇರೆಗೆ ನರೇಗಾ ಯೋಜನೆಯಡಿ 150 ಮಾನವ ದಿನಗಳನ್ನು ಹೆಚ್ಚುವರಿಯಾಗಿ ನೀಡಿ ಕೇಂದ್ರ ಸರಕಾರ ಆದೇಶಿಸಿದೆ. ಈ ಮೂಲಕ ರಾಜ್ಯ ಗ್ರಾಪಂ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲು ಸಾಧ್ಯವಾಗಿದೆ ಎಂದರು.

ಸಮುದ್ರದ ಪಾಲಾಗುತ್ತಿರುವ ಮಳೆ ನೀರನ್ನು ಕೃಷಿ ಜಮೀನುಗಳಲ್ಲಿ ಇಂಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಕ್ಯಾಚ್ ದಿ ರೈನ್ ಯೋಜನೆಯಡಿಯಲ್ಲಿ ರಾಜ್ಯಕ್ಕೆ 2934 ಕೋ. ರೂ. ನುದಾನ ನೀಡಿದೆ. ಈ ಅನುದಾನದಲ್ಲಿ ಮಳೆ ನೀರು ಇಂಗಿಸಿ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳನ್ನು ರಾಜ್ಯಾದ್ಯಂತ ಕೈಗೊಳ್ಳಲಾಗಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕದ ರಾಜ್ಯ ಮೊದಲ ಸ್ಥಾನದಲ್ಲಿದೆ. ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿಯಲ್ಲಿ ಕೇಂದ್ರ ಸರಕಾರವು ರಾಜ್ಯದಲ್ಲಿ 5401 ಕಿಮೀ ರಸ್ತೆ ಅಭಿವೃದ್ಧಿಗೆ 3587 ಕೋ. ರೂ. ಬಿಡುಗಡೆ ಮಾಡಿದ್ದು, ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯದ ಪ್ರತೀ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲು 8196 ಕೋ. ರೂ. ಅನುದಾನ ನೀಡಿದೆ. ಈ ಯೋಜನೆಯನ್ನು ಮುಂದಿನ 2024ರೊಳಗೆ ರಾಜ್ಯದಲ್ಲಿ ಎಲ್ಲ ಮನೆಗಳಿಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರಗಳ ಸಾಧನೆಗಳನ್ನು ಜನಸ್ವರಾಜ್ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ ಜನಜಾಗೃತಿ ಮೂಡಿಸಲಾಗುವುದು. ಈ ಮೂಲಕ ಮುಂದಿನ ತಾಪಂ, ಜಿಪಂ ಚುನಾವಣೆ ಸೇರಿದಂತೆ ವಿಧಾನ ಪರಿಷತ್, ವಿಧಾನಸಭೆ ಚುನಾವಣೆಗಳಿಗೆ ತಯಾರಿ ನಡೆಸಲಾಗುವುದು. ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು ಎಂದರು.

ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ವಾಣಿಜ್ಯ ಬೆಳೆಯಾಗಿರುವ ಅಡಿಕೆ ಬೆಳೆ ಬೆಳೆಯುವಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದ್ದು, ಈ ಹಿಂದಿನ ಸರಕಾರಗಳ ಅವಧಿಯಲ್ಲಿ ಅಡಿಕೆ ಬೆಳೆ ಆರೋಗ್ಯಕ್ಕೆ ಹಾನಿಕಾರಕ ಎಂದು ವರದಿ ನೀಡಿ ಅಡಿಕೆ ಬೆಳೆಗಾರರನ್ನು ಆತಂಕದಲ್ಲಿ ದೂಡಲಾಗಿತ್ತು. ಆದರೆ ಮೋದಿ ಸರಕಾರ ಅಡಿಕೆ ಬೆಳೆ ಹಾನಿಕಾರಕ ಅಲ್ಲ ಎಂಬ ಬಗ್ಗೆ ಪೂರಕವಾದ ವರದಿಯನ್ನು ಸಿದ್ಧಪಡಿಸಿದ್ದು, ಈ ಬಗ್ಗೆ ಸುಪ್ರೀಂಕೋರ್ಟ್ಗೆ ದಾಖಲೆ ಸಲ್ಲಿಸಲಾಗುವುದು. ರಾಜ್ಯದ ಅಡಿಕೆ ಬೆಳೆಗಾರರ ಪರವಾಗಿ ಬಿಜೆಪಿ ಸರಕಾರ ಇದ್ದು ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದ ಅವರು, ಅತಿವೃಷ್ಟಿ, ಅಕಾಲಿಕ ಮಳೆಯಿಂದಾಗಿ ಕಾಫಿ, ಅಡಿಕೆ ಬೆಳೆಗಾರರ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಈ ಸಂಬಂಧ ಹಾನಿಯ ಅಂಕಿಅಂಶಗಳೊಂದಿಗೆ ಅಧಿವೇಶನದಲ್ಲಿ ಸರಕಾರದ ಗಮನಸೆಳೆದು ಪರಿಹಾರ ಒದಗಿಸಲಾಗುವುದು ಎಂದರು.

ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದಲ್ಲಿ 5 ದಿನಗಳ ಕಾಲ 4 ತಂಡಗಳಲ್ಲಿ ಜನಸ್ವರಾಜ್ ಯಾತ್ರೆ ನಡೆಯಲಿದ್ದು, ಈ ಯಾತ್ರೆ ಮೂಲಕ  ಗ್ರಾಪಂ ಸೇರಿದಂತೆ ಪಕ್ಷದ ಕಾರ್ಯಕರ್ತರಾಗಿರುವ ಎಲ್ಲ ಜನಪ್ರತನಿಧಿಗಳನ್ನು ಭೇಟಿ ಮಾಡಿ ಮುಂದಿನ ಎಲ್ಲ ಚುನಾವಣೆಗಳನ್ನು ಗೆಲ್ಲಲು ಸಿದ್ಧತೆ ಕೈಗೊಳ್ಳಲಾಗುವುದು ಎಂದ ಅವರು, ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಯನ್ನು ವರಿಷ್ಠರು ಶೀಘ್ರ ಘೋಷಣೆ ಮಾಡಲಿದ್ದು, ಬಿಜೆಪಿ ಅಭ್ಯರ್ಥಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಎಚ್.ಟಿ.ಸೋಮಶೇಖರ್, ಮುಖಂಡರಾದ ಅಶ್ವಥ್‌ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಶಾಸಕರಾದ ಬೆಳ್ಳಿಪ್ರಕಾಶ್, ಡಿ.ಎಸ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಭಾರೀ ಹಾನಿ ಸಂಭವಿಸಿದ್ದು, ಈ ಸಂಬಂಧ ಹಾನಿಯ ಸಮೀಕ್ಷೆ ನಡೆಲಾಗಿದೆ. ಶೀಘ್ರ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಮನಮೋಹನ್ ಸಿಂಗ್ ಸರಕಾರದ 10 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಧಿಯಡಿಯಲ್ಲಿ ನೀಡಿದ್ದ ಅನುದಾನಕ್ಕಿಂತ 4 ಪಟ್ಟು ಅನುದಾನವನ್ನು ಮೋದಿ ಸರಕಾರ ಈ ಬಾರಿ ರಾಜ್ಯಕ್ಕೆ ನೀಡಿದೆ. ಕೇಂದ್ರ ಸರಕಾರ ಅನುದಾನ ನೀಡಿಲ್ಲ ಎಂದು ದೂರುವ ಕಾಂಗ್ರೆಸ್‌ನವರ ಆರೋಪದಲ್ಲಿ ಹುರುಳಿಲ್ಲ. ಈ ಬಗ್ಗೆ ಕಾಂಗ್ರೆಸ್‌ನವರು ಚರ್ಚೆ ಬರಲಿ.
- ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News