ಕರ್ನಾಟಕ: ಕಬ್ಬಿಣದ ಬೇಲಿ ದಾಟಿದ ಆನೆ: ವೀಡಿಯೊ ವೈರಲ್

Update: 2021-11-18 16:42 GMT

ಬೆಂಗಳೂರು: ಆನೆಗಳನ್ನು ಬೇಲಿಯಿಂದ ನಿಲ್ಲಿಸಬಹುದು ಎಂದು ಮನುಷ್ಯರು ಭಾವಿಸಿದ್ದರೆ, ಅದು ತಪ್ಪು. ಕರ್ನಾಟಕದಲ್ಲಿ ಆನೆಯೊಂದು ಕಬ್ಬಿಣದ ಬೇಲಿಯನ್ನು ದಾಟಿ ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಆರಂಭದಲ್ಲಿ ಆನೆಗೆ ಕಬ್ಬಿಣದ ಬೇಲಿ ದಾಟಲು ಅಸಾಧ್ಯವೆಂದು ಕಂಡು ಬಂದರೂ ಆನೆಯು ಬೇಲಿಯನ್ನು ಏರುವ ಮೂಲಕ ನೋಡುಗರನ್ನು ಬೆರಗುಗೊಳಿಸಿದೆ. ಈ ವೀಡಿಯೊವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ‘ಮೂಕ ವಿಸ್ಮಿತ’ ಎಂದು ಶೀರ್ಷಿಕೆ ನೀಡಿದ್ದಾರೆ.

 27 ಸೆಕೆಂಡುಗಳ ವೀಡಿಯೊವನ್ನು 1.86 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಹಾಗೂ  15,500 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.

ಮೈಸೂರು ಸಮೀಪದ ನಾಗರಹೊಳೆಯಲ್ಲಿ ಈ ಘಟನೆ ನಡೆದಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮಹೇಶ್ ಕುಮಾರ್, ವೀರನಹೊಸಳ್ಳಿ ವ್ಯಾಪ್ತಿಯಲ್ಲಿ ವೀಡಿಯೊ ರೆಕಾರ್ಡ್ ಮಾಡಲಾಗಿದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ತಿಳಿಸಿದರು ಹಾಗೂ  ನವೆಂಬರ್ 16 ರಂದು ಬೆಳಿಗ್ಗೆ ಪ್ರಾಣಿಯು ಬೆಳೆ ಹಾನಿಗೊಳಿಸಿದ ನಂತರ ಅರಣ್ಯಕ್ಕೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದರು.

ಆನೆಯೊಂದು ಬೇಲಿಯನ್ನು ಸುಲಭವಾಗಿ ದಾಟಿದುದನ್ನು ನೋಡಿ ವೀಕ್ಷಕರು ಆಶ್ಚರ್ಯಚಕಿತರಾದರು. ಕೆಲವು ಟ್ವಿಟ್ಟರ್ ಬಳಕೆದಾರರು ಈ ಹಿಂದೆಯೂ ಇಂತಹ ವೀಡಿಯೊಗಳನ್ನು ನೋಡಿದ್ದಾಗಿ  ಕಾಮೆಂಟ್ ಮಾಡಿದ್ದಾರೆ.

ಆನೆ ಬಿದಿರಿನ ಬೇಲಿಗಳ ಮೇಲೆ ಹತ್ತುವುದನ್ನು ನೋಡಿದ್ದೇನೆ. ಆನೆಗೆ  ಸುಲಭವಾಗಿ ಅವುಗಳನ್ನು ಮುರಿದು ನಡೆದುಕೊಂಡು ಹೋಗಬಹುದಿತ್ತು ಎಂದು  ಒಬ್ಬ ಬಳಕೆದಾರರು ಬರೆದಿದ್ದಾರೆ.

ಕೆಲವು ಬಳಕೆದಾರರು ವೀಡಿಯೊವನ್ನು ನೋಡಿದ ನಂತರ ಹಾಸ್ಯ ಚಟಾಕಿ ಹಾರಿಸಿದರು. ‘ಸಂಚಾರ ಉಲ್ಲಂಘನೆ. ಆನೆಗೆ 500 ರೂಪಾಯಿ ದಂಡ ವಿಧಿಸಬೇಕು’ ಎಂದು ಒಬ್ಬರು ಬರೆದಿದ್ದಾರೆ.

ಆದರೆ ಅನೇಕ ವೀಕ್ಷಕರು ಆನೆ ಬೇಲಿ ದಾಟಲು ಪರದಾಟ ನಡೆಸಿದ್ದನ್ನು ನೋಡಿ ಬೇಸರ ವ್ಯಕ್ತಪಡಿಸಿದರು. ಆ ಸ್ಥಳದಲ್ಲಿ ಬೇಲಿ ಹಾಕಿದ್ದನ್ನು ಪ್ರಶ್ನಿಸಿದರು. ಬೇಲಿ ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂದು ಜನರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News