ಕಾಂಗ್ರೆಸ್ ನ ಒಡೆದಾಳುವ ನೀತಿಯಿಂದ ಯಾವುದೇ ಪ್ರಯೋಜನವಿಲ್ಲ: ಜನಸ್ವರಾಜ್ ಸಮಾವೇಶದಲ್ಲಿ ಈಶ್ವರಪ್ಪ

Update: 2021-11-18 16:34 GMT

ಶಿವಮೊಗ್ಗ: ಕಾಂಗ್ರೆಸ್ ಒಡೆದಾಳುವ ನೀತಿಯನ್ನು ಅನುಸರಿಸುತ್ತದೆ. ಅದಕ್ಕಾಗಿಯೇ ಚುನಾವಣೆ ಸಂದರ್ಭದಲ್ಲಿ ಜಾತಿ, ಬಿಟ್ ಕಾಯಿನ್ ಇಂತಹ ಹಲವು ಅಂಶಗಳ ಬಗ್ಗೆ ಅಪಪ್ರಚಾರ ಮಾಡಿದೆ. ಆದರೆ, ಅದ್ಯಾವುದರ ಪ್ರಯೋಜನವಾಗಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದರು.

ಕಾಂಗ್ರೆಸ್‌ನವರು ಮೊದಲಿನಿಂದಲೂ ಒಡೆದಾಳುವ ನೀತಿ ಅನುಸರಿಸಿಕೊಂಡು ಬಂದಿದ್ದಾರೆ. ಲಿಂಗಾಯತರ ವಿಷಯಕ್ಕೆ ಕೈಹಾಕಿ ಸರಕಾರವನ್ನೇ ಕಳೆದುಕೊಂಡರು. ಬಿಟ್‌ಕಾಯಿನ್ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಈಗ ಮುಸಲ್ಮಾನರ ಗಲಾಟೆ. ಎರಡು ಬಣಗಳಾಗಿ ಅವರೇ ಹೊಡೆದಾಡುಕೊಳ್ಳುತ್ತಿದ್ದಾರೆ. ನಾವು ಭಾರತಾಂಬೆಯ ಮಕ್ಕಳು. ಜಾತಿ, ಆಮಿಷಗಳಿಗೆ ಒಳಗಾಗಬೇಡಿ. ಕಳೆದ ಬಾರಿ ಆಕಸ್ಮಿಕವಾಗಿ ಸೋತಿದ್ದೇವೆ. ಈ ಬಾರಿ ಸೋಲಲ್ಲ. ಅಭಿವೃದ್ಧಿ ಹಾಗೂ ದೇಶದ ವಿಚಾರ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಏನೇ ಪ್ರಮಾದಗಳಾಗಿರಬಹುದು. ಆದರೆ, ಈ ಸಲ ಅದು ಪುನಾವರ್ತನೆ ಆಗಬಾರದು. ಪ್ರತಿಯೊಬ್ಬರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಪಕ್ಷದ ಋಣ ತೀರಿಸಬೇಕು ಎಂದು ಕರೆ ನೀಡಿದರು.

1989ರಲ್ಲಿ ಶಿವಮೊಗ್ಗ ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದಾಗ ಬಿಜೆಪಿಗರ ಸಂಖ್ಯೆಯೇ ಇರಲಿಲ್ಲ. ಆಗ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ರೈತರ ಪರ ದನಿ ಎತ್ತಿ ನಿರಂತರ ಹೋರಾಟ ಮಾಡಿದ್ದರ ಫಲವಾಗಿ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲವಾಗಿದೆ. ಅದರ ಹಿಂದೆ ಪಕ್ಷದ ಹಿರಿಯರ ಶ್ರಮವಿದೆ. ಹೀಗಾಗಿ, ಸ್ಥಳೀಯ ಸಂಸ್ಥೆಯಿಂದ ಚುನಾಯಿತರಾಗಿರುವವರು ಅದರ ಋಣ ತೀರಿಸಬೇಕಾದ ಗಳಿಗೆ ಬಂದಿದ್ದು, ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿಪಕ್ಷದವರು ಎಷ್ಟೇ ಜಾತಿ, ಹಣ ಬಲ ತೋರಿಸಲಿ ಅದ್ಯಾವುದೂ ನಡೆಯುವುದಿಲ್ಲ. ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ನಾವೆಲ್ಲ ಶ್ರಮಿಸೋಣ ಎಂದರು. 

ಕಾಂಗ್ರೆಸ್ ಸುದೀರ್ಘ ಆಡಳಿತ ಅವಧಿಯಲ್ಲಿ ಗ್ರಾಮೀಣ ಭಾಗದ ದೇಶದ 19 ಕೋಟಿ ಮನೆಗಳ ಪೈಕಿ 3 ಕೋಟಿ ಮನೆಗಳಿಗೆ ನೀರಿನ ನಳದ ಸಂಪರ್ಕವಿತ್ತು. ಆದರೆ, ಮೋದಿ ಅವರ ಏಳು ವರ್ಷದ ಅವಧಿಯಲ್ಲಿ ಈ ಸಂಖ್ಯೆ ಎಂಟೂವರೆ ಕೋಟಿಗೆ ಏರಿಕೆಯಾಗಿದೆ. ಇದು ಮೋದಿ ಅವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

16 ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು: ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ರಾಜ್ಯದ ಸ್ಥಳೀಯ ಸಂಸ್ಥೆಗಳ ಒಟ್ಟು 25 ವಿದಾನ ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಅದರಲ್ಲಿ 16 ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿವಮೊಗ್ಗದ ಸ್ಥಳೀಯ ಸಂಸ್ಥೆಗಳಲ್ಲಿ 2,445 ಬಿಜೆಪಿಯವರೇ ಇದ್ದಾರೆ. ಹೀಗಾಗಿ, ಗೆಲ್ಲುವುದರ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದರು.

ಕಾಂಗ್ರೆಸ್‍ನವರಿಗೆ ಬುರುಡೆ ಬಿಡುವುದು ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ಪಂಚಾಯಿತಿ ಮಟ್ಟದ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಇಲ್ಲದೇ ಇರುವುದರಿಂದ ಕಾಂಗ್ರೆಸ್‍ನವರು ಗೆದ್ದವರೆಲ್ಲ ತಮ್ಮ ಪಕ್ಷದವರೇ ಅಂದುಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಕೋವಿಡ್ ಸಂದಿಗ್ಧ ಸ್ಥಿತಿಯಲ್ಲೂ ಕೇಂದ್ರ ಮತ್ತು ರಾಜ್ಯ ಸರಕಾರ ಗುಣಮಟ್ಟದ ಆರೋಗ್ಯ ಸೇವೆ ನೀಡಿದೆ. ಜೊತೆಗೆ, ಶುದ್ಧದ ಕುಡಿಯುವ ನೀರು, ನೂತನ ಶಿಕ್ಷಣ ನೀತಿ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ಮಾನವ ದಿನಗಳ ಸೃಷ್ಟಿ ಈ ಎಲ್ಲ ಕೆಲಸಗಳನ್ನು ಬಿಜೆಪಿ ಮಾಡಿದೆ. ಅದರಲ್ಲೂ ಶಿವಮೊಗ್ಗ ಬಿಜೆಪಿ ಭದ್ರ ನೆಲೆಯಾಗಿರುವುದರಿಂದ ಗೆಲುವಿನ ಬಗ್ಗೆ ಎಳ್ಳಷ್ಟು ಸಂಶಯವಿಲ್ಲ ಎಂದರು.

ಶಾಸಕರಾದ ಹರತಾಳು ಹಾಲಪ್ಪ, ಆಯನೂರು ಮಂಜುನಾಥ್, ಭಾರತಿಶೆಟ್ಟಿ, ಅಶೋಕ್ ನಾಯ್ಕ್, ಮಾಡ್ಯಾಳ ವಿರೂಪಾಕ್ಷಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾe, ಪ್ರಮುಖರಾದ ಕೆ.ಎಸ್.ಗುರುಮೂರ್ತಿ, ಡಿ.ಎಸ್. ಅರುಣ್, ಎಂ.ಬಿ.ಭಾನುಪ್ರಕಾಶ್, ಎ.ಎನ್.ನಟರಾಜ್, ಪವಿತ್ರಾ ರಾಮಯ್ಯ, ಸುನೀತಾ ಅಣ್ಣಪ್ಪ, ಅಶ್ವತ್ಥ್ ನಾರಾಯಣ್, ವಿನಯ್ ಬಿದರೆ ಸೇರಿದಂತೆ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಇದ್ದರು.

`ನಾನು ಮೆಂಬರ್ ಆಫ್ ಪಾರ್ಲಿಮೆಂಟ್, ನೀವು ಮೆಂಬರ್ ಆಫ್ ಪಂಚಾಯತ್' ಹೀಗಾಗಿ, ನಾವಿಬ್ಬರು ಒಂದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಮೋದಿ ಅವರು ಸ್ಮಾರ್ಟ್ ಸಿಟಿ ಮತ್ತು ಸ್ಮಾರ್ಟ್ ವಿಲೇಜ್ ಪರಿಕಲ್ಪನೆಯ ಮೂಲಕ ಹಲವು ಸೌಲಭ್ಯಗಳನ್ನು ದೇಶಾದ್ಯಂತ ನೀಡಿದ್ದಾರೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ರಸ್ತೆಗಳನ್ನು ಕಲ್ಪಿಸಲಾಗಿದೆ. ನೂರಾರು ಕೋಟಿ ರೂ. ವೆಚ್ಚದಲ್ಲಿ 623 ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದರು.

ನರೇಗಾ ಬಗ್ಗೆ ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿದ್ದು, ಅವರ ಅವಧಿಯಲ್ಲಿ ಆರೇಳು ತಿಂಗಳಾದರೂ ನರೇಗಾ ಕೂಲಿ ಹಣ ಪಾವತಿ ಆಗುತ್ತಿರಲಿಲ್ಲ. ಆದರೆ, ಬಿಜೆಪಿ ನೇತೃತ್ವದ ಸರಕಾರದ ಅವಧಿಯಲ್ಲಿ ಸಕಾಲಕ್ಕೆ ನರೇಗಾ ಹಣ ಬಿಡುಗಡೆ ಮಾಡುವುದಲ್ಲದೇ ಮಾನವ ದಿನಗಳನ್ನು 150ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಗ್ರಾಮೀಣ ಭಾಗದ ಜೀವನ ಹಸನಾಗಿದೆ ಎಂದು ಹೇಳಿದರು.

ಮೋದಿ ಆಡಳಿತ ಅವಧಿಯಲ್ಲಿ ಯೋಜನೆಗಳು  ದೇಶದ ಪ್ರತಿ ಹಳ್ಳಿಗೂ ತಲುಪಿಸಲಾಗಿದೆ. ಆದ್ದರಿಂದ, ಮತ ಕೇಳುವ ನೈತಿಕ ಹಕ್ಕು ನಮಗಿದೆ. ಆದರೆ, ಚರ್ಚಿಸುವುದಕ್ಕೆ ಉತ್ತಮ ವಿಚಾರಗಳಿಲ್ಲದ್ದಕ್ಕೆ ಚುನಾವಣೆ ವೇಳೆ ಪ್ರತಿಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಬಿಜೆಪಿಯಲ್ಲಿ ಆ ಕಡೆ, ಈ ಕಡೆ ಓಡಿಹೋಗುವ ಕಾರ್ಯಕರ್ತರಿಲ್ಲ. ಅಂಥಹ ಸಂಸ್ಕಾರ ನಮಗೆ ಪಕ್ಷ ನೀಡಿದೆ. ಅದನ್ನು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲ್ಲಿಸುವ ಮೂಲಕ ತೋರಿಸಬೇಕಿದೆ. ಕಳೆದ ಸಲ ಆದ ತಪ್ಪು ಪುನರಾವರ್ತನೆ ಆಗಬಾರದು ಎಂದರು.

ಅಂದುಕೊಂಡ ಕಾಯಿದೆಗಳನ್ನು ಜಾರಿಗೆ ತಂದು ಕಾನೂನು ಸ್ವರೂಪ ನೀಡಬೇಕಾದರೆ ಅದಕ್ಕೆ ವಿಧಾನಸಭೆ, ಲೋಕಸಭೆಯಲ್ಲಿ ಮಾತ್ರ ಬಹುಮತ ಸಿಕ್ಕರೆ ಸಾಲದು. ರಾಜ್ಯದಲ್ಲಿ ವಿಧಾನ ಪರಿಷತ್ತು ಮತ್ತು ಕೇಂದ್ರದಲ್ಲಿ ರಾಜ್ಯಸಭೆಯಲ್ಲೂ ಬಹುಮತ ಬೇಕು. ಅದಕ್ಕಾಗಿಯೇ ಬಿಜೆಪಿ ಜನಸ್ವರಾಜ್ ಸಮಾವೇಶ ಮಾಡುತ್ತಿದೆ ಎಂದರು 

ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಆಗಿದ್ದಾಗ ಹೇಳಿಕೊಳ್ಳುವ ಒಂದೇ ಒಂದು ಯೋಜನೆಯನ್ನೂ ನೀಡಿಲ್ಲ. ಆದರೆ, ಮೋದಿ ಅವರು ಅಧಿಕಾರಕ್ಕೆ ಬಂದ 7 ವರ್ಷಗಳಲ್ಲಿ ಸಾಕಷ್ಟು ಯೋಜನೆಗಳನ್ನು ನೀಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದನ್ನು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅರಿತುಕೊಳ್ಳಬೇಕು ಎಂದು ಹೇಳಿದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಅವಕಾಶ ನೀಡಿದ್ದಕ್ಕೆ ಮಂತ್ರಿಯಾಗಿದ್ದೇನೆ. ಅವರು ರೈತರ ಪರ ಹೊಂದಿದ್ದ ಆಶೋತ್ತರಗಳಿಗೆ ಅನುಗುಣವಾಗಿ ಕೆಲಸ ಮಾಡಿದ್ದೇನೆ ಎಂದರು.

ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳ ಪೈಕಿ ಶಿವಮೊಗ್ಗ, ಕಲಬುರಗಿ, ಕೋಲಾರ ಮತ್ತು ತುಮಕೂರು ಬ್ಯಾಂಕ್‍ಗಳಲ್ಲಿ ಅವ್ಯವಹಾರ ನಡೆದಿತ್ತು. ಅದನ್ನು ಬಯಲಿಗೆಳೆದು, ಬ್ಯಾಂಕ್ ಉನ್ನತ ಸ್ಥಿತಿಗೆ ತರಲಾಗಿದೆ. ಇದಕ್ಕೆ ಯಡಿಯೂರಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಪ್ರಸ್ತುತ ತುಮಕೂರು ಮತ್ತು ಕೋಲಾರ ಬ್ಯಾಂಕ್‍ಗಳ ಅವ್ಯವಹಾರ ಪ್ರಕರಣ ವಿರುದ್ಧ ಕ್ರಮಕೈಗೊಳ್ಳಬೇಕಿದೆ. ಅದು ಶೀಘ್ರವೇ ಆಗಲಿದೆ ಎಂದು ತಿಳಿಸಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 2,445 ಬಿಜೆಪಿಯ ಜನಪ್ರತಿನಿಧಿಗಳೇ ಇದ್ದಾರೆ. ಹೀಗಾಗಿ, ಶಿವಮೊಗ್ಗದಲ್ಲಿ ಗೆಲುವು ನಿರಾಯಾಸವಾಗಿದೆ. ಆದರೆ, ಪ್ರತಿಪಕ್ಷದವರನ್ನು ನಮ್ಮ ಮೀನಿನ ಬುಟ್ಟಿಗೆ ಕೈಹಾಕಲು ಬಿಡಬಾರದು. ಸಾಧ್ಯವಾದರೆ ಅವರ ಬುಟ್ಟಿಗೆ ಕೈಹಾಕಬಹುದು. ವಿಜಯೋತ್ಸವದಲ್ಲಿ ಭೇಟಿಯಾಗೋಣ.

- ಆರಗ ಜ್ಞಾನೇಂದ್ರ, ಗೃಹ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News