ಸಿದ್ದರಾಮಯ್ಯ ಅವರಿಂದ ಅಹಿಂದ ವರ್ಗ ದೂರ ಆಗುತ್ತಿದೆ: ಎಚ್. ವಿಶ್ವನಾಥ್

Update: 2021-11-18 17:46 GMT

ಮೈಸೂರು.ನ.18: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡಿದ್ದ ಅಹಿಂದ ವರ್ಗವೇ ಸಿದ್ದರಾಮಯ್ಯ ಅವರ ನಡವಳಿಕೆ ಮತ್ತು ಅವರ ಮಾತುಗಳಿಂದ ದೂರ ಆಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್  ದೂರಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವ ಅಹಿಂದ ವರ್ಗ ಸಿದ್ದರಾಮಯ್ಯ ಅವರನ್ಮು ಅಪ್ಪಿಕೊಂಡು ಅವರನ್ನು ಈ ಎತ್ತರಕ್ಕೆ ಕೊಂಡೊಯ್ಯಿತೊ ಅದೇ  ಅಹಿಂದ ವರ್ಗ ಸಿದ್ದರಾಮಯ್ಯ ಅವರಿಂದ ದೂರ ಆಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅವರ ಪಕ್ಷದ ಅಲ್ಪಸಂಖ್ಯಾತ ಸಮಾವೇಶದಲ್ಲಿ ಸಿದ್ದರಾಮಯ್ಯ ಅರ್ಧಕ್ಕೆ ತಮ್ಮ ಭಾಷಣವನ್ನು ನಿಲ್ಲಿಸಿ ಹೋಗುವಂತಾಗಿದೆ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ದಲಿತರು ಮುಖ್ಯಮಂತ್ರಿಗಳಾಗಬೇಕು ಎಂದು ಒಂದು ಬಾರಿ ಹೇಳುತ್ತಾರೆ. ಮತ್ತೊಮ್ಮೆ ನಾನೂ ದಲಿತ ಹಾಗಾಗಿ ನಾನೇ ಮುಂದಿನ ಮುಖ್ಯಮಂತ್ರಿ ಎನ್ನುತ್ತಾರೆ. ಇವರಿಗೆ ಸ್ವಲ್ಪನಾದರು ವಿವೇಚನೆ ಇದಿಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅಂತಹ ಉತ್ತಮ ನಾಯಕರಿದ್ದಾರೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾದರೆ ಅವರು ಎಲ್ಲಿಗೆ ಹೋಗಬೇಕು ಎಂದರು.

ಬಿಟ್ ಕಾಯಿನ್ ಬಗ್ಗೆ ಆರೋಪ ಮಾಡುವ ಸಿದ್ದರಾಮಯ್ಯ ಅವರಿಗೆ ಬಿಟ್ ಕಾಯಿನ್ ಎಂದರೆ ಗೊತ್ತಿಲ್ಲ, ಇವರ ಅಧಿಕಾರವಧಿಯಲ್ಲೇ ಬಿಟ್ ಕಾಯಿನ್ ಪ್ರಾರಂಭ ಆಗಿದೆ. ಹಾಗಾಗಿಯೇ ಯುಬಿಸಿಟಿಯಲ್ಲಿ ನಳಪಾಡ್, ಶ್ರೀಕೃಷ್ಣ ಮತ್ತು ವಿದ್ವತ್ ನಡುವೆ ಗಲಾಟೆಗಳಾಗಿದ್ದು ಎಂದು ಆರೋಪಿಸಿದರು.

ಬೊಮ್ಮಾಯಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲುವಾಗಿ ವಿರೋಧ ಪಕ್ಷಗಳು ಬಿಟ್ ಕಾಯಿನ್ ವಿಚಾರವಾಗಿ ಅನಗತ್ಯ ಚರ್ಚೆ ಮಾಡುತ್ತಿದ್ದಾರೆ. ನಿಮ್ಮ ಬಳಿ ಯಾವುದಾದರೂ ಒಂದು ಸಾಕ್ಷಿ ಇದ್ದರೆ ನೀಡಿ. ನಾನೇ ಸರ್ಕಾರಕ್ಕೆ ಒತ್ತಾಯ ಮಾಡಿ ತನಿಖೆಗೆ ಆಗ್ರಹಿಸುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News