ಸುಡಾನ್ ನಲ್ಲಿ ತೀವ್ರಗೊಂಡ ಪ್ರತಿಭಟನೆ: ಗುಂಡೇಟಿನಿಂದ 15 ಮಂದಿ ಸಾವು

Update: 2021-11-18 18:18 GMT
photo:twitter/AFP

ಕಾಟೂಮ್, ನ.18: ಸುಡಾನ್‌ನಲ್ಲಿ ಸೇನಾಡಳಿತ ವಿರೋಧಿ ಪ್ರತಿಭಟನೆ ತೀವ್ರಗೊಂಡಿದ್ದು ಬುಧವಾರ ಸಾವಿರಾರು ಮಂದಿ ಪ್ರಮುಖ ರಸ್ತೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಂದರ್ಭ ಭದ್ರತಾ ಪಡೆಗಳು ಹಾರಿಸಿದ ಗುಂಡಿನಿಂದ ಕನಿಷ್ಟ 15 ಮಂದಿ ಮೃತಪಟ್ಟಿದ್ದು ಹಲವರು ಗಂಭೀರ ಗಾಯಗೊಂಡಿದ್ದಾರೆ ಎಂದು ಸುಡಾನ್ ವೈದ್ಯರ ಸಂಘಟನೆ ಹೇಳಿದೆ.

ಅಕ್ಟೋಬರ್ 25ರಂದು ಕ್ಷಿಪ್ರಕ್ರಾಂತಿಯ ಮೂಲಕ ಸೇನೆಯು ದೇಶದ ಆಡಳಿತವನ್ನು ಕೈವಶ ಮಾಡಿಕೊಂಡಿದ್ದು ಇದನ್ನು ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಕ್ಷಿಪ್ರಕ್ರಾಂತಿ ನಡೆಸಿದ ಮುಖಂಡರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಹಾಗೂ ದೇಶದ ಆಡಳಿತವನ್ನು ಮತ್ತೆ ಪ್ರಜಾಪ್ರಭುತ್ವ ಸರಕಾರಕ್ಕೆ ವಹಿಸಬೇಕು ಎಂದು ಆಗ್ರಹಿಸಿ ಬುಧವಾರ ರಾಜಧಾನಿ ಕಾಟೂಮ್ ಹಾಗೂ ಪ್ರಮುಖ ನಗರಗಳಾದ ಬಾಹ್ರಿ ಮತ್ತು ಒಮ್ಡರ್‌ಮಾನ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ.

ರಸ್ತೆಯಲ್ಲಿ ಟಯರ್‌ಗಳನ್ನು ರಾಶಿಹಾಕಿ ಬೆಂಕಿ ಹಚ್ಚಿ ಸಂಚಾರಕ್ಕೆ ತಡೆಯೊಡ್ಡಿದ ಪ್ರತಿಭಟನಾಕಾರರು ಸೇನಾಡಳಿತದ ವಿರುದ್ಧ ಮತ್ತು ಗೃಹಬಂಧನದಲ್ಲಿ ಇರಿಸಲಾಗಿರುವ ಪ್ರಧಾನಿ ಅಬ್ದಲ್ಲಾ ಹಮ್ದಾಕ್ ಪರ ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಬಳಿಕ ಗೋಲೀಬಾರ್ ನಡೆಸಿದ್ದು ಕನಿಷ್ಟ 15 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News