ಶಿವಮೊಗ್ಗ: ಮದುವೆ ಛತ್ರದಲ್ಲಿ ಊಟ ಮಾಡಿದ ಹಲವರಿಗೆ ವಾಂತಿ ಬೇಧಿ; ಆಸ್ಪತ್ರೆಗೆ ದಾಖಲು

Update: 2021-11-18 18:26 GMT

ಶಿವಮೊಗ್ಗ: ಮದುವೆ ಛತ್ರದಲ್ಲಿ ಗಂಡು ಹೆಣ್ಣಿನ ಧಾರೆ ಕಾರ್ಯ ಮುಗಿಸಿ ಊಟ ಮಾಡಿದ ನೂರಾರು ಜನರಿಗೆ ರಾತ್ರಿಯಾಗುತ್ತಿದ್ದಂತೆ ವಾಂತಿ ಬೇಧಿ ಕಾಣಿಸಿಕೊಂಡು ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆ, ಭದ್ರಾವತಿ ಸಾರ್ವಜನಿಕ ಆಸ್ಪತ್ರೆ ಹಾಗೂ  ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗಳಲ್ಲಿ ಒಟ್ಟು 95 ಮಂದಿ ದಾಖಲಾಗಿರುವ ಘಟನೆ ಗುರುವಾರ ನಡೆದಿದೆ. 

ಭದ್ರಾವತಿ  ತಾಲೂಕಿನ ಅರದೊಟ್ಟಲು ಗ್ರಾಮದ ಶ್ಯಾಮರಾವ್ ಕುಟುಂಬದ ಮಗನ ಮದುವೆ ಗ್ರಾಮಕ್ಕೆ ಹತ್ತಿರದ ನಾಗತಿಬೆಳಗಲು ಗ್ರಾಮದ ಛತ್ರದಲ್ಲಿ  ಮಂಗಳವಾರ ಹಾಗೂ ಬುಧವಾರ ನಡೆದಿದ್ದು ಮಂಗಳವಾರ ರಾತ್ರಿ ಆರತಕ್ಷತೆಯ ಊಟ ಮಾಡಿದ ನೆಂಟರಿಷ್ಟರು ಸಂಬಂಧಿಗಳು ಹಾಗೂ ಗ್ರಾಮಸ್ಥರಿಗೆ ಯಾವುದೆ ತೊಂದರೆ ಆಗಿಲ್ಲ. ಆದರೆ ಬುಧವಾರ ಬೆಳಗ್ಗೆ ಹಾಗೂ ಮಧ್ಯಾಹ್ನ ಮುಹೂರ್ತದ ಭೋಜನ ಸ್ವೀಕರಿಸಿದ ಕೆಲವರಲ್ಲಿ ರಾತ್ರಿಯಾಗುತ್ತಿದ್ದಂತೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದೆ. ಕೆಲವರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡರೆ ಕೆಲವರಿಗೆ ಜ್ವರ ಕಾಣಿಸಿಕೊಂಡಿದೆ.

ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರಾಗಿ ಆಸ್ಪತ್ರೆ ಕಡೆಗೆ ಚಿಕಿತ್ಸೆಗಾಗಿ ಬರುತ್ತಿರುವುದನ್ನು ಗಮನಿಸಿರುವ ಆಸ್ಪತ್ರೆ ವೈದ್ಯರಿಗೆ ಮದುವೆ ಮನೆಯಲ್ಲಿ ಊಟ ಮಾಡಿದವರಿಗೆ ಸಮಸ್ಯೆಯಾಗಿರುವುದು ತಿಳಿದು ಬಂದಿದೆ. ಫುಡ್ ಪಾಯಿಸನ್ ಆಗಿರುವುದನ್ನು ಖಚಿತಪಡಿಸಿಕೊಂಡಿರುವ ವೈದ್ಯರು ರೋಗಿಗಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯಕ್ಕೆ ವಾಂತಿ ಬೇಧಿ ಜ್ವರ ಕಾಣಿಸಿಕೊಂಡ 35 ರೋಗಿಗಳು ಭದ್ರಾವತಿ ಹಳೇನಗರ ಸಾರ್ವಜನಿಕ ಆಸ್ಪತ್ರೆ, ಹೊಳೆಹೊನ್ನೂರು ಆಸ್ಪತ್ರೆ ಹಾಗೂ ಮೆಗ್ಗಾನ್ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಬೀಗರ ಮನೆ ಬ್ಯಾಡಗಿಯಿಂದ ಬಂದಿದ್ದವರಿಗೂ ಕೂಡ ಆರೋಗ್ಯದ ಸಮಸ್ಯೆ ಎದುರಾಗಿದ್ದು ಅಲ್ಲಿಯೂ ಕೆಲವರು ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News