×
Ad

ಕೃಷಿ ನೀತಿಗಳಿಗೆ ಸಂಬಂಧಿಸಿ ಪ್ರಧಾನಿಯ ನಿರ್ಧಾರಕ್ಕೂ ವಿಧಾನಸಭೆ ಚುನಾವಣೆಗಳಿಗೂ ಯಾವುದೇ ಸಂಬಂಧವಿಲ್ಲ: ಸಿಎಂ ಬೊಮ್ಮಾಯಿ

Update: 2021-11-19 17:07 IST

ಬೆಂಗಳೂರು, ನ. 19: `ಕೃಷಿ ಸಂಬಂಧಿ ಮೂರು ಕಾಯ್ದೆಗಳನ್ನು ಹಿಂಪಡೆದಿರುವುದರ ಹಿಂದೆ ಯಾವುದೇ ಚುನಾವಣೆಯ ಪ್ರಭಾವವಿಲ್ಲ. ಪ್ರಧಾನಿ ಮೋದಿಯವರ ನಿರ್ಧಾರಕ್ಕೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ರೈತರ ಹೋರಾಟಕ್ಕೆ ಮಣಿಯುವ ಪ್ರಶ್ನೆಯೂ ಉದ್ಭವಿಸಿಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಎಪಿಎಂಸಿ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡುವ ವ್ಯವಸ್ಥೆ ಪರವಾಗಿ ರೈತರು ಹೋರಾಟ ನಡೆಸುತ್ತಿದ್ದರು. ಇದು ಸ್ಪಂದನಶೀಲ ಸರಕಾರ. ರೈತರ ಹೋರಾಟಕ್ಕೆ ಸ್ಪಂದಿಸಿ ಕೇಂದ್ರ ಸರಕಾರ ತಾನು ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿದೆ ಎಂದು ವಿವರಣೆ ನೀಡಿದರು.

`1991-92ರಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಉದಾರಿಕರಣ, ಜಾಗತಿಕರಣ, ಖಾಸಗಿಕರಣ ಆರಂಭವಾಗಿತ್ತು. ಅದರ ಭಾಗವಾಗಿ ಹಲವು ಕಾಯ್ದೆಗಳನ್ನು ತರುವ ಉದ್ದೇಶವಿತ್ತು. ವಿಶ್ವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು ಕಾಂಗ್ರೆಸ್ ಅವಧಿಯಲ್ಲೇ. ಅದರ ಮುಂದುವರಿದ ಭಾಗವಾಗಿ ಈ ಕಾಯ್ದೆಗಳನ್ನು ತರಲಾಗಿತ್ತು' ಎಂದು ಬಸವರಾಜ ಬೊಮ್ಮಾಯಿ ಕಾಯ್ದೆ ಜಾರಿಯನ್ನು ಸಮರ್ಥಿಸಿದರು.

`ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಮಸೂದೆಗಳ ಕರಡು ಸಿದ್ಧವಾಗಿತ್ತು. ಅದನ್ನು ಎನ್‍ಡಿಎ ಸರಕಾರ ಅನುಮೋದಿಸಿತ್ತು. ರೈತರ ಒತ್ತಾಯದಂತೆ ಹಿಂಪಡೆಯಲಾಗಿದೆ. ಹೀಗಾಗಿ ಮೂರು ಕೃಷಿ ಕಾಯ್ದೆ ಹಿಂಪಡೆದಿರುವುದರ ಹಿಂದೆ ಬೇರೆ ಯಾವುದೇ ರೀತಿಯ ಉದ್ದೇಶವಿಲ್ಲ' ಎಂದು ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಸ್ಪಷ್ಟಣೆ ನೀಡಿದರು.

`ಎರಡು ತಿಂಗಳಿಂದ ರಾಜ್ಯದಲ್ಲಿ ವ್ಯಾಪಕವಾಗಿ ಅಕಾಲಿಕ ಮಳೆಯಾಗಿದೆ. ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಿಗೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ. ಹಾವೇರಿ, ಬೆಳಗಾವಿ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಾನಿ ಸಂಭವಿಸಿದೆ. ಪ್ರಾಥಮಿಕ ಅಂದಾಜು ಮಾಡಿದ ಬಳಿಕ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ ಮಾರ್ಗಸೂಚಿ ಆಧರಿಸಿ ರೈತರಿಗೆ ಪರಿಹಾರ ನೀಡಲಾಗುವುದು'

-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News