ರಾಜ್ಯದಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ನ.26ಕ್ಕೆ ಹೋರಾಟ: ಕೋಡಿಹಳ್ಳಿ ಚಂದ್ರಶೇಖರ್

Update: 2021-11-19 11:53 GMT

ಬೆಂಗಳೂರು, ನ. 19: `ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರಕಾರ ವಿವಾದಿತ ಮೂರು ಕೃಷಿ ಕಾಯ್ದೆ ಹಿಂಪಡೆದಿದೆ. ರಾಜ್ಯದಲ್ಲಿಯೂ ಕೃಷಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಲು ಆಗ್ರಹಿಸಿ ನ.26ಕ್ಕೆ ರೈತರು ಹೆದ್ದಾರಿ ಬಂದ್ ಸೇರಿದಂತೆ ಹೋರಾಟ ಮುಂದುವರಿಸಲಿದ್ದಾರೆ' ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಶುಕ್ರವಾರ `ವಾರ್ತಾಭಾರತಿ' ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, `ಕೃಷಿ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ದಿಲ್ಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ನ.26ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. 700 ಮಂದಿ ರೈತರ ಈ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಇಂತಹ ಐತಿಹಾಸಿಕ ಹೋರಾಟವನ್ನು ಮಣಿಸಲು ಕೇಂದ್ರ ಸರಕಾರ ರೈತರ ವಿರುದ್ಧ ಲಾಠಿ ಪ್ರಹಾರ, ಜಲಪಿರಂಗಿ, ಪ್ರತಿಭಟನಾನಿರತ ರೈತರ ಮೇಲೆ ಕಲ್ಲು ತೂರಾಟವನ್ನು ನಡೆಸಿದ್ದನ್ನು ನೋಡಿದ್ದೇವೆ' ಎಂದರು.

`ಜತೆಗೆ ಜ.26ರ ಗಣರಾಜ್ಯೋತ್ಸವದ ದಿನ ರೈತರಿಗೆ ಕಳಂಕ ತರುವ ಉದ್ದೇಶದಿಂದಲೇ ಕೆಂಪುಕೋಟೆ ಮೇಲೆ ತಿರಂಗ ಧ್ವಜ ತೆರವು ವಿವಾದ ಸೃಷ್ಟಿಸಿ ರೈತರನ್ನು ಮನಸೋ ಇಚ್ಛೆ ಥಳಿಸಲಾಯಿತು. ಆ ಬಳಿಕ ಧ್ವಜವನ್ನು ಹಾರಿಸಿದ್ದು ಬಿಜೆಪಿ ಕಾರ್ಯಕರ್ತನೆಂಬುದು ಬಹಿರಂಗವಾಯಿತು. ಇದೀಗ ರಾಜಕೀಯ ಕಾರಣಕ್ಕಾಗಿ ಉಪಚುನಾವಣೆಯಲ್ಲಿ ಮೋದಿ ವ್ಯಕ್ತಿತ್ವ ಪರಿಣಾಮ ಬೀರದ ಕಾರಣ ರೈತ ವಿರೋಧಿ ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯಲಾಗಿದೆ' ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

`ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆಯಲಾಗುವುದು ಎಂದು ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಾಗೂ ಜಾನುವಾರು ಹತ್ಯಾ ಪ್ರತಿಬಂಧಕ ಕಾಯ್ದೆ ತಿದ್ದುಪಡಿ ಮಾಡಿದ್ದು, ಈ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನ ವಹಿಸಿದ್ದಾರೆ. ಕೂಡಲೇ ಮೇಲ್ಕಂಡ ರೈತ ವಿರೋಧಿ ಕಾಯ್ದೆ ಹಿಂಪಡೆಯುವ ವರೆಗೂ ರೈತರ ಹೋರಾಟ ನಿಲ್ಲದು. ನ.26ಕ್ಕೆ ರೈತರ ಹೆದ್ದಾರಿ ಬಂದ್ ಸಹಿತ ಹೋರಾಟ ಮುಂದುವರಿಸಲಿದ್ದಾರೆ' ಎಂದು ಕೋಡಿಹಳ್ಳಿ ಚಂದ್ರಶೇಖರ್ ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News