'40ಶೇ. ಕಮಿಷನ್' ಆರೋಪ: ರಾಜ್ಯ ಸರ್ಕಾರವನ್ನು ಕೂಡಲೇ ವಜಾಗೊಳಿಸುವಂತೆ ಸಿದ್ದರಾಮಯ್ಯ ಒತ್ತಾಯ
ಮೈಸೂರು,ನ.19: ರಾಜ್ಯ ಸರ್ಕಾರದ ಪ್ರತಿ ಕಾಮಗಾರಿ ಟೆಂಡರ್ ಪಡೆಯಲು ಶೇ.40 ರಷ್ಟು ಪರ್ಸೆಂಟೇಜ್ ಕೊಡಬೇಕು ಎಂದು ಗುತ್ತಿಗೆದಾರರೇ ಆರೋಪಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕಮಿಷನ್ ಪಡೆಯುವ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡೆ ಇಲ್ಲ, ಹಾಗಾಗಿ ರಾಜ್ಯ ಸರ್ಕಾರವನ್ನು ಕೂಡಲೇ ವಜಾಗೊಳಿಸುವಂತೆ ರಾಜ್ಯ ಪಾಲರಿಗೆ ಪತ್ರ ಬರೆಯುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರತಿ ಕಾಮಗಾರಿ ಟೆಂಡರ್ ಪಡೆಯಲು ಶೇ.40ರಷ್ಟು ಪರ್ಸೆಂಟೇಜ್ ಕೊಡಬೇಕು ಅಂತ ಆರೋಪಿಸಿದ್ದಾರೆ. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ಎಂಬುದನ್ನೂ ವಿವರಿಸಿದ್ದಾರೆ. ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಯಾವಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪರ್ಸೆಂಟೇಜ್ ಎಂಬುದನ್ನು ಮಾಧ್ಯಮಗಳ ಮುಂದೆಯೇ ಬಹಿರಂಗವಾಗಿ ಹೇಳಿದ್ದಾರೆ. ಈ ಆರೋಪಗಳನ್ನ ನಾನು ಮಾಡಿದ್ದರೆ ಪ್ರತಿಪಕ್ಷದವರು ಅನ್ನಬಹುದಿತ್ತು. ಆದರೆ ಟೆಂಡರ್ ಪಡೆಯುವವರೆ ಶೇ.40 ಪರ್ಸೆಂಟ್ ಆರೋಪ ಮಾಡಿರುವುದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮುಂದುವರೆಯಬಾರದು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು “ನಾ ಕಾವೂಂಗಾ ನಾ ಕಾನೇದೂಂಗಾ” ಅನ್ನುತ್ತಿದ್ದರು. ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಮಿಷನ್ ಪಡೆಯುವ ಸರ್ಕಾರವನ್ನ ನಾನು ಜೀವಮಾನದಲ್ಲಿ ನೋಡಿಲ್ಲ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ ಎಂದು ಸಿದ್ಧರಾಮಯ್ಯ ತಿಳಿಸಿದರು.
ದೆಹಲಿ ರೈತರ ಹೋರಾಟದಲ್ಲಿ ಮೃತಪಟ್ಟವರಿಗೆ ತಲಾ 25ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಸಿದ್ಧರಾಮಯ್ಯ, ಇದುವರೆಗೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವವರೂ ರೈತರೇ ಅಲ್ಲ ಅನ್ನುತ್ತಿದ್ದರು. ಈಗ ಮೂರು ಕಾಯ್ದೆಗಳನ್ನು ವಾಪಸ್ಸ್ ತೆಗೆದುಕೊಂಡಿದ್ದಾರೆ. ಈಗ ರೈತರ ಹೋರಾಟಕ್ಕೆ ಮಣಿದು ಕೃಷಿ ಕಾಯ್ದೆಗಳನ್ನು ವಾಪಸ್ಸ್ ಪಡೆದಿದ್ದಾರೆ. ಬಿಜೆಪಿಯವರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಅಂತ ನಾನು ಹೇಳುವುದಿಲ್ಲ. ಇದು ರೈತರ ಹೋರಾಟಕ್ಕೆ ಸಂದ ಜಯ. ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ರೈತರ ನ್ಯಾಯಯುತವಾದ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.