ರಾಜ್ಯದಲ್ಲಿ ಹೋರಾಟ ಮುಂದುವರಿಯಲಿದೆ: ಸಂಯುಕ್ತ ಹೋರಾಟ-ಕರ್ನಾಟಕ
ಬೆಂಗಳೂರು, ನ. 19: ಕೇಂದ್ರದ ವಿವಾದಿತ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರಾಷ್ಟ್ರದ ರಾಜಧಾನಿ ದಿಲ್ಲಿ ಗಡಿ ನಡೆಯುತ್ತಿರುವ ಐತಿಹಾಸಿಕ ಹೋರಾಟ ಇದೇ ತಿಂಗಳ 26ಕ್ಕೆ ವರ್ಷ ಪೂರ್ಣಗೊಳ್ಳಲಿದೆ. ಈ ಮಧ್ಯೆ ರೈತರ ಹೋರಾಟಕ್ಕೆ ಕೊನೆಗೂ ಮಣಿದಿರುವ ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆ ಹಿಂಪಡೆಯುವ ಘೋಷಣೆ ಮಾಡಿದ್ದಾರೆ. ಆದರೆ, ರೈತರು ಸದ್ಯಕ್ಕೆ ತಮ್ಮ ಚಳವಳಿಯಿಂದ ಹಿಂದೆ ಸರಿಯದಿರಲು ತೀರ್ಮಾನ ಮಾಡಿದ್ದಾರೆ.
ರಾಜ್ಯ ಸರಕಾರ ಜಾರಿಗೆ ತಂದಿರುವ `ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಾಗೂ ಜಾನುವಾರು ಸಂರಕ್ಷಣೆ ಮತ್ತು ಹತ್ಯಾ ಪ್ರತಿಬಂಧಕ ಕಾಯ್ದೆ ತಿದ್ದುಪಡಿ'ಯನ್ನು ವಾಪಸ್ ಪಡೆಯಲು ಆಗ್ರಹಿಸಿ ನ.26ಕ್ಕೆ ರೈತರು ಹೆದ್ದಾರಿ ಬಂದ್ ಸೇರಿದಂತೆ ತಮ್ಮ ಹೋರಾಟವನ್ನು ಮುಂದುವರಿಯಲಿದ್ದಾರೆ ಎಂದು ರೈತ ಮುಖಂಡರು ಪ್ರಕಟಿಸಿದ್ದಾರೆ.
ಕೇಂದ್ರ, ರಾಜ್ಯ ಸರಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ `ಸಂಯುಕ್ತ ಹೋರಾಟ-ಕರ್ನಾಟಕ' ತುರ್ತು ಸಭೆ ನಡೆಸಿದ್ದು, `ಕೃಷಿ ಕಾಯ್ದೆ ತಿದ್ದುಪಡಿ ಹಿಂಪಡೆದಿದ್ದು ರೈತರ ಸುದೀರ್ಘ ಚಳವಳಿಗೆ ಜಯ ಸಿಕ್ಕಂತೆ ಆಗಿದೆ. ಇತಿಹಾಸ ಪುನರಾವರ್ತನೆಗೊಂಡಿದೆ. ಆದರೆ ಕಿಸಾನ್ ಮೋರ್ಚಾ ಹೋರಾಟ ಅಚಲ. ಜನ ವಿರೋಧಿ ನೀತಿ ವಿರುದ್ಧ ಮುಂದುವರೆಯಲಿದೆ' ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
`ಸ್ವಾಮಿನಾಥನ್ ವರದಿ ಅನ್ವಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಶಾಸನದ ಬೆಂಬಲ ನೀಡಬೇಕು. ವಿದ್ಯುತ್ ಮಸೂದೆ ವಾಪಸ್ ಪಡೆಯಬೇಕು, ರದ್ದುಗೊಳಿಸಿದ ಕಾರ್ಮಿಕ ಸಂಹಿತೆಯ ನಾಲ್ಕು ಕೋಡ್‍ಗಳನ್ನು ಹಿಂಪಡೆಯಬೇಕು. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಜಾರಿಗೆ ತಂದಿರುವ ಭೂ ಸುಧಾರಣೆ, ಎಪಿಎಂಸಿ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಹಿಂಪಡೆಯಬೇಕು' ಎಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ಸಿಎಂ ನಿಲುವು ಆಧರಿಸಿ ಮುಂದಿನ ನಡೆ: `ವಿವಾದಿತ ಮೂರು ಕೃಷಿ ಕಾಯ್ದೆ ಹಿಂಪಡೆದಿರುವುದು ಈ ದೇಶದ ದುಡಿದುಣ್ಣುವ ಜನರಿಗೆ ಸಿಕ್ಕ ಅಮೋಘ ಜಯವಾಗಿದೆ. ಇಡೀ ದೇಶದ ರೈತಾಪಿ ತೋರ್ಪಡಿಸಿದ ಸಂಕಲ್ಪ ಹಾಗೂ 700 ರೈತ ಹುತಾತ್ಮರ ತ್ಯಾಗ ಬಲಿದಾನಕ್ಕೆ ಈ ಶ್ರೇಯಸ್ಸು ಸಲ್ಲುತ್ತದೆ. ಹೋರಾಟಕ್ಕೆ ಸಿಕ್ಕ ಈ ಜಯವನ್ನು ಹರ್ಷದಿಂದ ಸ್ವಾಗತಿಸೋಣ, ಆಸ್ವಾದಿಸೋಣ' ಎಂದು ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ತಿಳಿಸಿದ್ದಾರೆ.
`ಆದರೆ, ರೈತರ ಮತ್ತೊಂದು ಬಹುಮುಖ್ಯ ಹಕ್ಕೊತ್ತಾಯವಾದ ರೈತರ ಕೃಷಿ ಉತ್ಪನ್ನಗಳಿಗೆ `ನ್ಯಾಯಯುತ ಬೆಲೆ ನಿಗದಿ ಕಾಯ್ದೆ' ಕುರಿತು ಪ್ರಧಾನಿ ಮೋದಿಯವರು ಯಾವ ಮಾತನ್ನೂ ಆಡಿಲ್ಲ ಎಂಬುದನ್ನು ಮರೆಯದಿರೋಣ. ಬೆಳೆಗೆ ಬೆಲೆ ಖಾತ್ರಿಯಾಗದೆ ರೈತರ ಸಂಕಷ್ಟ ಪರಿಹಾರವಾಗಲು ಸಾಧ್ಯವಿಲ್ಲ. ಹಾಗಾಗಿ ಕೇಂದ್ರ ಸರಕಾರ ಈ ಮುಖ್ಯ ಹಕ್ಕೊತ್ತಾಯಕ್ಕೆ ಸ್ಪಂದಿಸದೆ ಹೋರಾಟ ಹಿಂತೆಗೆಯುವ ಮಾತೇ ಇರುವುದಿಲ್ಲ' ಎಂದು ನೂರ್ ಶ್ರೀಧರ್ ಸ್ಪಷ್ಟಣೆ ನೀಡಿದ್ದಾರೆ.
`ಅದೇ ಸಂದರ್ಭದಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿತ ಮೂರು ಕಾಯ್ದೆಗಳನ್ನು (ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ರದ್ದತಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ) ರಾಜ್ಯ ಸರಕಾರ ಹಿಂತೆಗೆದುಕೊಳ್ಳಬೇಕಿದೆ. ಹಾಗಾಗಿ ಕರ್ನಾಟಕದ ರೈತ ಚಳವಳಿಯ ಮುಂದಿನ ನಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿಲುವನ್ನು ಆಧರಿಸಿದೆ' ಎಂದು ನೂರ್ ಶ್ರೀಧರ್ ತಿಳಿಸಿದ್ದಾರೆ.
`ಪ್ರಧಾನಿ ಮೋದಿಯವರು ಕೇಂದ್ರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಾಸ್ ತೆಗೆದುಕೊಂಡಿದ್ದಾರೆ. ಸಂತೋಷ. ರಾಜ್ಯ ಸರಕಾರ ತಾನು ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ಹಿಂತೆಗೆದುಕೊಳ್ಳಲಿದೆಯೆ? ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತರಿಸಬೇಕು. ಇಲ್ಲವಾದರೆ ನ.26ಕ್ಕೆ ನಿಗದಿಯಂತೆ ನಮ್ಮ ಹೋರಾಟ ಮುಂದುವರಿಯಲಿದೆ' ಎಂದು *ನೂರ್ ಶ್ರೀಧರ್* ಸ್ಪಷ್ಟಪಡಿಸಿದ್ದಾರೆ.
`ಸರ್ವಾಧಿಕಾರಿ ಧೋರಣೆಯ ಪ್ರಧಾನಿ ಮೋದಿಯವರನ್ನು ರೈತರ ಐತಿಹಾಸಿಕ ಹೋರಾಟ ಮಣಿಸಿದೆ. ವಿವಾದಿತ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಲಾಗಿದೆ. ಆದರೆ, ರೈತರ ಪ್ರಮುಖ ಬೇಡಿಕೆಯಾಗಿದ್ದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ಸಂಬಂಧ ಕಾಯ್ದೆ ಜಾರಿ, ವಿದ್ಯುತ್ ಬಿಲ್ ಮಸೂದೆ ಹಿಂಪಡೆಯುವ ಬಗ್ಗೆ ಪ್ರಧಾನಿ ಪ್ರತಿಕ್ರಿಯೆಯನ್ನೇ ನೀಡಿಲ್ಲ. ರಾಜ್ಯದಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂ ಸುಧಾರಣೆ ರದ್ದತಿ ಕಾಯ್ದೆ ಹಾಗೂ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಹಿಂಪಡೆಯಲು ಆಗ್ರಹಿಸಿ ನ.26ಕ್ಕೆ ಹೆದ್ದಾರಿ ಬಂದ್ ಹೋರಾಟ ಮುಂದುವರಿಯಲಿದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ, ಅಕಾಲಿಕ ಮಳೆಯಿಂದ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ, ರೈತರಿಗೆ ನೀಡುವ ಹಾಲಿನ ದರ ಏರಿಕೆ ಸೇರಿದಂತೆ ರೈತರ ನ್ಯಾಯಯುತ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು'
-ಜೆ.ಸಿ.ಬಯಾರೆಡ್ಡಿ ಪ್ರಾಂತ ರೈತ ಸಂಘದ ಮುಖಂಡ