ವಿಪ್ ಉಲ್ಲಂಘನೆ: ಬಿಜೆಪಿ ಬೆಂಬಲಿಸಿದ ಅರಸೀಕೆರೆ ನಗರಸಭೆಯ 7 ಮಂದಿ ಜೆಡಿಎಸ್ ಸದಸ್ಯರ ಸದಸ್ಯತ್ವ ಅನರ್ಹ

Update: 2021-11-19 15:51 GMT

ಹಾಸನ: ಜೆಡಿಎಸ್ ಪಕ್ಷದಿಂದ ಗೆದ್ದು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿದ್ದ ಅರಸೀಕೆರೆ ನಗರಸಭೆಯ ಏಳು ಜೆಡಿಎಸ್‌ ಸದಸ್ಯರನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.

ಜೆಡಿಎಸ್ ಚಿಹ್ನೆಯಡಿ ಸ್ಪರ್ಧಿಸಿ ಆಯ್ಕೆಗೊಂಡಿದ್ದ ಎಂ.ಎಸ್‌. ಹರ್ಷವರ್ಧನರಾಜ್ (ವಾರ್ಡ್ ನಂ.1), ಚಂದ್ರಶೇಖರಯ್ಯ (ವಾರ್ಡ್ ನಂ.9), ಎನ್‌.ಕವಿತಾದೇವಿ (ವಾರ್ಡ್ ನಂ. 18), ಎ.ವಿ. ದರ್ಶನ್ (ವಾರ್ಡ್ ನಂ.19), ಬಿ.ಎನ್.ವಿದ್ಯಾಧರ್ (ವಾರ್ಡ್ ನಂ.25), ಆಯಿಷಾ (ವಾರ್ಡ್ ನಂ.28), ಪುಟ್ಟಸ್ವಾಮಿ ನಂ.15), 'ಕಲೈ ಅರಸಿ (ವಾರ್ಡ್ ನಂ.2), ಜೂನ್ 22ರಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡರ ವಿರುದ್ಧ ಬಹುಮತ ಇಲ್ಲದಿದ್ದರೂ ನಗರಸಭೆ ಅಧ್ಯಕ್ಷಗಾದಿಗೆ ಏರಿದ್ದ ಬಿಜೆಪಿಗೆ ನೆರವಾಗೋ ನಿರ್ಧಾರದೊಂದಿಗೆ ಪ್ರತ್ಯೇಕ ಆಸನಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಹಾಸನ ಜಿಲ್ಲಾಧಿಕಾರಿ ಎದುರು ಕಚೇರಿಯಲ್ಲಿ ಪ್ರತ್ಯಕ್ಷವಾಗಿದ್ದ ಜೆಡಿಎಸ್‌ನ 7 ನಗರಸಭೆ ಸದಸ್ಯರು ಅರಸೀಕೆರೆ ಜೆಡಿಎಸ್‌ ನಲ್ಲಿ ಶಾಸಕರಿಂದ ತಮಗೆ ಉಸಿರುಗಟ್ಟಿಸೋ ವಾತಾವರಣ ಇದೆ. ನಾವು ಗೆದ್ದಿರೋ ಮೂರನೇ ಒಂದು ಭಾಗ ಸದಸ್ಯರು ಪಕ್ಷ ತೊರೆದು ಹೊರ ಬರುತ್ತಿದ್ದೇವೆ, ನಮಗೆ ಕೂರೋಕೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು. ಹಾಗೆಯೇ ನಾವು ವಿಷಯಾಧರಿತವಾಗಿ ಬಿಜೆಪಿಯಿಂದ ಅಧ್ಯಕ್ಷರಾಗಿರೋ ಗಿರೀಶ್ ರನ್ನ ಬೆಂಬಲಿಸುತ್ತೇವೆ ಎಂದು ಹೇಳಿ ಮನವಿ ಸಲ್ಲಿಸಿದ್ದರು. ಮರುದಿನವೇ 2ನೇ ವಾರ್ಡ್ ಸದಸ್ಯೆ ಕಲೆ ಅರಸಿ ವಾಪಸ್ ಜೆಡಿಎಸ್ ನಾಯಕರ ಬಳಿ ಬಂದಿದ್ದರು. ನಮಗೆ 10 ಲಕ್ಷದ ಆಮಿಷವೊಡ್ಡಿದರು, ಅಂದು ಸಿಎಂ ಯಡಿಯೂರಪರ ರಾಜಕೀಯ ಕಾರ್ಯದರ್ಶಿ ಸಂತೋಷ್ ಬಲವಂತವಾಗಿ ಅವರ ಆಪ್ತರ ಮೂಲಕ 10 ಲಕ್ಷ ಹಣವನ್ನೂ ಮನೆಯಲ್ಲಿ ಇಟ್ಟು ಹೋಗಿದ್ದರು ಎಂದು ಆಪರೇಷನ್ ಕಮಲದ ಬಾಂಬ್ ಸಿಡಿಸಿದರು.

7 ಸದಸ್ಯರ ಮನವಿ ಸ್ವೀಕಾರ ಮಾಡಿದ್ದ ಜಿಲ್ಲಾಧಿಕಾರಿಗಳು ಈ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರಿಗೆ ನೋಟೀಸ್ ನೀಡಿದರು. ಈ ನೊಟೀಸ್ ನೀಡಿ ಜೆಡಿಎಸ್ ಬಂಡಾಯ ಸದಸ್ಯರ ವಿರುದ್ಧ ಅನರ್ಹತೆಯ ಬಾಣ ಪ್ರಯೋಗಿಸಿತ್ತು. ಪಕ್ಷಾಂತರ ನಿಷೇಧ ಕಾಯಿದೆಯ ಉಲ್ಲಂಘನೆ ಎಂದು ಡಿಸಿ ಕೋರ್ಟ್‌ನಲ್ಲಿ ದೂರು ನೀಡಿತ್ತು. ಮಂಡ್ಯ, ಹುಣಸೂರು, ಚಾಮರಾಜನಗರಗಳಲ್ಲಿಯೂ ಹೀಗೆ ಸದಸ್ಯರು ಬಂಡಾಯವೆದ್ದು ಹೋದಾಗ ಕೋರ್ಟ್ ಕೊಟ್ಟ ತೀರ್ಪು ಉಲ್ಲೇಖಿಸಿ ವಾದ ಮಂಡಿಸಿತ್ತು. ಎರಡೂ ಕಡೆಯವರ ವಾದ ವಿವಾದ ಆಲಿಸಿರೋ ಡಿಸಿಯವರು ತೀರ್ಪು ನೀಡಿ ಎಲ್ಲಾ ಏಳು ಜನರನ್ನೂ ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.

ನಗರಸಭೆ ಚುನಾವಣೆಯಲ್ಲಿ ಗೆದ್ದ 21 ಜನ ಸದಸ್ಯರಲ್ಲಿ 7 ಜನರು ಹೊರ ಹೋದರೆ ಪಕ್ಷಾಂತರ ನಿಷೇಧ ಕಾಯಿದೆ ಅಡ್ಡಿಯಾಗಲ್ಲ ಎನ್ನುವ ಲೆಕ್ಕಾಚಾರದಿಂದ ಪಕ್ಷ ತೊರೆಯೋಕೆ ಮುಂದಾಗಿದ್ದವರು ಇದೀಗ ಅನ ರ್ಹಗೊಂಡಿದ್ದಾರೆ. ಒಟ್ಟು 31 ಸದಸ್ಯಬಲದ ಅರಸೀಕೆರೆ ನಗರಸಭೆಯಲ್ಲಿ ಜೆಡಿಎಸ್ ಬರೊಬ್ಬರಿ 21 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News