'ಯಾರ ಸ್ವರಾಜ್ಯಕ್ಕಾಗಿ ಬಿಜೆಪಿಯ ಯಾತ್ರೆ': ಎಚ್‍ಡಿಕೆ ಪ್ರಶ್ನೆ

Update: 2021-11-19 18:10 GMT

ಬೆಂಗಳೂರು, ನ.19: ರಾಜ್ಯದಲ್ಲಿ ಮಹಾಮಳೆಯಿಂದ ಜನರು ಸಂಕಷ್ಟದಲ್ಲಿ ಸಿಲುಕಿದ್ದರೆ ಆಡಳಿತಾರೂಢ ಬಿಜೆಪಿ ಪಕ್ಷ ಶಂಖ ಊದಿಕೊಂಡು ಜನ ಸ್ವರಾಜ್ ಯಾತ್ರೆ ಅಂತ ಶುರು ಮಾಡಿಕೊಂಡಿದೆ. ಯಾರ ಸ್ವರಾಜ್ಯಕ್ಕಾಗಿ ಈ ಯಾತ್ರೆ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.

ಶುಕ್ರವಾರ ನಗರದಲ್ಲಿರುವ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಎಂಥದ್ದೋ ಶಂಖ ಊದೋಕೆ ಹೋಗಿದ್ದಾರೆ. ಶಂಖ ಊದಿದರೇ ಜನರಿಗೆ ಸ್ವರಾಜ್ಯ ಬರುತ್ತದಾ? ಇದರಿಂದ ರೈತರ ಸಮಸ್ಯೆ ಬಗೆಹರಿಯುತ್ತಾ? ಎಂದು ಟೀಕಾ ಪ್ರಹಾರ ನಡೆಸಿದರು.

ರಾಜ್ಯದಲ್ಲಿ ಅನೇಕ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಸರಕಾರದ ಅಂದಾಜಿನ ಪ್ರಕಾರ 7 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶ ಆಗಿದೆ. ಚಿಕ್ಕಮಗಳೂರು ಕಡೆ ಕಾಫಿ ತೋಟಗಳು ಹಾಳಾಗಿವೆ. ರಾಯಚೂರು ಜಿಲ್ಲೆಯಲ್ಲಿ ಭತ್ತ ಕೆಸರಿನಲ್ಲಿ ಮುಚ್ಚಿ ಹೋಗಿದೆ. ಚಿತ್ರದುರ್ಗ, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಎಲ್ಲ ಕಡೆ ಅನಾಹುತ ಆಗಿದೆ. ಬೆಂಗಳೂರಿನಲ್ಲೂ ರಸ್ತೆಗಳು ಹಾಳಾಗಿವೆ, ಹಲವಾರು ಸಮಸ್ಯೆಗಳು ಎದುರಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರ, ಸಚಿವರು ತ್ವರಿತವಾಗಿ ಪರಿಹಾರ ಕೆಲಸ ಮಾಡುವುದು ಬಿಟ್ಟು ಶಂಖ ಊದಿಕೊಂಡು ಹೋದರೆ ಹೇಗೆ? ಎಂದು ಅವರು ಕಿಡಿಕಾರಿದರು.

ಕೊರೋನ ಸಂಕಷ್ಟದಿಂದ ಜನರ ಬದುಕು ಏನಾಗಿದೆ? ಅವರು ಬದುಕು ದಯನೀಯವಾಗಿ ಬದಲಾಗಿದೆ. ಹೆಜ್ಜೆ ಹೆಜ್ಜೆಗೂ ರೈತರು ಕಷ್ಟದಲ್ಲಿದ್ದಾರೆ. ಸರಕಾರ ಮತ್ತು ಸಚಿವರು ಏನು ಮಾಡುತ್ತಿದ್ದಾರೆ. ಮಳೆ ಅನೇಕ ದಿನಗಳಿಂದ ಬೀಳುತ್ತಿದ್ದರೂ ಅವರು ಜನರ ಕಡೆ ತಲೆ ಹಾಕುತ್ತಿಲ್ಲ ಎಂದು ಅವರು ಕಿಡಿಗಾರಿದರು.

ಗೋವಿನ ಸಂರಕ್ಷಣೆ ಮಾಡುತ್ತೇವೆ ಎಂದು ಸರಕಾರ ಹೇಳಿ ಎಲ್ಲ ಕಡೆ ಗೋಶಾಲೆಗಳನ್ನು ತೆರೆಯುತ್ತವೆ ಎಂದು ಹೇಳಿತ್ತು. ಈಗ ನೋಡಿದರೆ ಗೋಶಾಲೆಗಳನ್ನು ತೆರೆಯಲು ಕೇವಲ 25 ಕೋಟಿ ರೂಪಾಯಿ ಕೊಡಲಾಗುವುದು ಎಂದು ಹೇಳುತ್ತಿದ್ದಾರೆ. ಗೋ ಶಾಲೆಗಳಿಗೆ ಹಣ ನೀಡುವುದಕ್ಕೂ ಸಾಕಾರಕ್ಕೆ ಆಗಿಲ್ಲ. ಬೆಳೆ ನಾಶದಿಂದ ಮೇವು ಕೊರತೆ ಉಂಟಾಗಿದೆ. ಇದೆಲ್ಲಾ ಒಂದಕ್ಕೊಂದು ಚೈನ್ ಲಿಂಕ್ ಇದೆ. ಸ್ಥಳೀಯ ಮಟ್ಟದಲ್ಲಿ ಡಿಸಿಗಳು  ಇಷ್ಟೊತ್ತಿಗೆ ಸಮೀಕ್ಷೆ ಮಾಡಬೇಕಿತ್ತು. ಅದಾವುದೂ ಆಗಿಲ್ಲ. ಶಂಕ ಊದಿಕೊಂಡು ಹೋದರೆ ಇದೆಲ್ಲ ಬಗೆಹರಿಯುತ್ತಾ? ಎಂದು ಅವರು ಪ್ರಶ್ನಿಸಿದರು.

ಮೊದಲು ಸರಕಾರ ಕಮೀಶನ್ ಹೊಡೆಯುವ ಕೆಲಸಗಳನ್ನು ನಿಲ್ಲಿಸಬೇಕು. ಈ ಬಗ್ಗೆ ಯಾರೋ ಪ್ರಧಾನ ಮಂತ್ರಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಪಸರ್ಂಟೇಜ್ ವ್ಯವಹಾರ ಇನ್ನಾದರೂ ನಿಲ್ಲಿಸಬೇಕು ಎಂದು ತೀಕ್ಷ್ಣವಾಗಿ ಹೇಳಿದ ಅವರು, ಕೇಂದ್ರ  ಸರಕಾರದ ಮುಂದೆ ಅರ್ಜಿ ಇಡ್ಕೊಂಡು ಹೋದ್ರೆ ಆಗುತ್ತಾ? ಎಸ್ ಡಿಆರ್‍ಎಫ್ ನಿಂದ ಕೂಡಲೇ ಹಣ ಬಿಡುಗಡೆ ಮಾಡಬೇಕು. ಕೂಡಲೇ ಜಿಲ್ಲಾ ಕೇಂದ್ರಗಳಲ್ಲಿ ಸಭೆಗಳನ್ನು ಮಾಡಿ, ಬೆಳೆ ಪರಿಹಾರ ನೀಡುವ ಬಗ್ಗೆ ತುರ್ತು ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಕಾಂಗ್ರೆಸ್ ಬಿಜೆಪಿಯ ‘ಸಿ’ ಟೀಮ್?

ಕಾಂಗ್ರೆಸ್ ಪಕ್ಷದವರು ಮಂಡ್ಯ ಅಭ್ಯರ್ಥಿಯಾಗಿ ದಿನೇಶ್ ಗೂಳಿಗೌಡ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ದಿನೇಶ್ ಗೂಳಿಗೌಡ ಈ ಹಿಂದೆ ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದವರಿಗೆ (ಡಾ.ಜಿ.ಪರಮೇಶ್ವರ್) ಸಹಾಯಕರಾಗಿದ್ದರು. ಆನಂತರ, ಕಾಂಗ್ರೆಸ್‍ನಿಂದ ಬಿಜೆಪಿ ಹೋಗಿ ಸಚಿವರಾಗಿರುವವರಿಗೆ(ಸಹಕಾರ ಸಚಿವ ಎಸ್.ಟಿ.ಸೋಮಶೇಖರ್) ಸಹಾಯಕರಾಗಿದ್ದರು. ಅಂತಹವರನ್ನು ಕರೆದು ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ಹಾಗಾದರೆ, ಕಾಂಗ್ರೆಸ್ ಪಕ್ಷವು ಬಿಜೆಪಿಯ ‘ಸಿ’ ಟೀಮ್ ಆಗಿದ್ಯಾ ಎನ್ನುವುದನ್ನು ಅವರೇ ಹೇಳಬೇಕು.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News