ರಾಜ್ಯದಲ್ಲಿ ಕಾಯ್ದೆ ಹಿಂಪಡೆದರೆ ಮಾತ್ರ ಯಶಸ್ಸು: ಪ್ರಕಾಶ್ ಕಮ್ಮರಡಿ

Update: 2021-11-19 17:28 GMT

ಬೆಂಗಳೂರು, ನ. 19: `ಬಿಜೆಪಿ ರೈತಪರ ಎಂದು ತನ್ನ ಮುಖವಾಡ ಬದಲಾಯಿಸಿ ಚುನಾವಣಾ ರಾಜಕೀಯದ ಲಾಭ ಪಡೆಯಲು ಎಲ್ಲ ಪ್ರಯತ್ನ ಮಾಡಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹಾಗೆ ಶೀಘ್ರ ತೋರಿಕೆಗೆ ಬೆಂಬಲ ಬೆಲೆಗೆ ಕಾನೂನನ್ನು ತರಬಹುದು, ಜೊತೆಗೆ ಪ್ರಭಾವಿ ಕೆಲ ಮುಖಂಡರುಗಳನ್ನು, ಸೆಳೆದುಕೊಳ್ಳಬಹುದು. ಎಲ್ಲವುದರಲ್ಲೂ ರೈತ ಸಂಘಟನೆಗಳು ಎಚ್ಚರವಹಿಸಬೇಕು' ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.

ಕೃಷಿ ಕಾಯ್ದೆ ಹಿಂಪಡೆಯಲಾಗಿದೆ ಎಂದು ಮೋದಿ ಪ್ರಕಟಿಸಿದ ಬಳಿಕ ಪ್ರತಿಕ್ರಿಯಿಸಿರುವ ಅವರು, `ಕರ್ನಾಟಕದಲ್ಲಿ ಈಗಾಗಲೇ ತಿದ್ದುಪಡಿ ಮಾಡಿರುವ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳು ಅನುಷ್ಠಾನಗೊಂಡಿದೆ. ಶೇ.70ರಿಂದ 80ರಷ್ಟು ವಿವಿಧ ಬೆಳೆಗಳಲ್ಲಿ ಎಪಿಎಂಸಿ ಒಳಗಿನ ವ್ಯವಹಾರ ಈಗಾಗಲೇ ಕಡಿಮೆಯಾಗಿದೆ. ಮುಕ್ತ ವ್ಯಾಪಾರದ ಮೂಲಕ ರೈತರ ಲೂಟಿಗೆ ಅವಕಾಶ ನೀಡಿದೆ. ಕರ್ನಾಟಕದಲ್ಲಿ ಈ ಕಾಯ್ದೆಗಳು ವಾಪಾಸು ಬಂದಾಗ ಮಾತ್ರ ನಾವೆಲ್ಲ ಯಶಸ್ಸು ಸಾಧಿಸಿದ್ದೇವೆ ಎಂದು ಭಾವಿಸಬಹುದು ಎಂದು ತಿಳಿಸಿದ್ದಾರೆ. 

`ಒಂದು ವರ್ಷ ಕಾಲ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ರೈತರಿಗೆ ಕೊನೆಗೂ ಜಯ ಸಿಕ್ಕಿದೆ. ಒಕ್ಕೂಟ ಸರಕಾರವು ರೈತರ ಹೋರಾಟಕ್ಕೆ ಮಣಿದಿದೆ. ದೇಶವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು. ದಿಲ್ಲಿ ಗಡಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ಮನೆಗೆ ಹಿಂತಿರುಗಬೇಕು ಎಂದು ಮನವಿ ಮಾಡಿದ್ದಾರೆ. ರೈತರ ಒಂದು ವರ್ಷದ ಹೋರಾಟದ ಫಲವಾಗಿ ಕೊನೆಗೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News