ಶನಿವಾರ ಸಂತೆ ಪಾಕಿಸ್ತಾನ್ ಝಿಂದಾಬಾದ್ ಪ್ರಕರಣ: ಪತ್ರಕರ್ತ ಹರೀಶ್ ಸಹಿತ ಮೂವರ ಮೇಲೆ ಎಫ್ ಐ ಆರ್

Update: 2021-11-20 08:33 GMT

ಮಡಿಕೇರಿ : ಶನಿವಾರ ಸಂತೆಯಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಂಬೇಡ್ಕರ್ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದ ವಿಡಿಯೋ ತಿರುಚಿ ಪಾಕಿಸ್ತಾನ್ ಝಿಂದಾಬಾದ್ ಹೇಳಿದ್ದಾರೆಂದು ವದಂತಿ ಹಬ್ಬಿಸಿದ ಆರೋಪದಲ್ಲಿ ಮೂವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ರಘು ಎಸ್ ಎನ್ , ಹರೀಶ್ ಹಾಗು ಗಿರೀಶ್ ಆರೋಪಿಗಳು. ಈ ಪೈಕಿ ಹರೀಶ್ ಕನ್ನಡ ಪ್ರಭ ಪತ್ರಿಕೆಯ ಸ್ಥಳೀಯ  ವರದಿಗಾರನಾಗಿದ್ದು, ಸೋಮವಾರಪೇಟೆ ಪತ್ರಕರ್ತರ ಸಂಘದ ಅಧ್ಯಕ್ಷರಾಗಿದ್ದಾರೆ.

ಶನಿವಾರ ಸಂತೆ ಗ್ರಾಮ ಪಂಚಾಯತ್ ಸದಸ್ಯ ರಘು, ಮಾಜಿ ಸದಸ್ಯ ಹಾಗು ಪತ್ರಕರ್ತ ಹರೀಶ್ ಹಾಗು ಕುಶಾಲ್ ನಗರದ ಗಿರೀಶ್ ಕೋಮು ಸೌಹಾರ್ದ ಕದಡುವ ದುರುದ್ದೇಶದಿಂದ ತಿರುಚಿದ ವಿಡಿಯೋ ವಾಟ್ಸ್ ಆಪ್ ನಲ್ಲಿ ಹರಡಿ  ಪ್ರತಿಭಟನೆಯ ಸಂದರ್ಭ ಮುಸ್ಲಿಂ ಮಹಿಳೆಯರು  ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ, ಹಿಂದೂ ಸಂಘಟನೆ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಬಂದಿದ್ದಾರೆ. ಹಾಗಾಗಿ ನ.15ರಂದು ಶನಿವಾರ ಸಂತೆ ಬಂದ್ ಮಾಡುವಂತೆ ಕರೆ ನೀಡಿದ್ದರು ಎಂದು ಎಫ್ ಐ ಆರ್ ನಲ್ಲಿ ಹೇಳಲಾಗಿದೆ. 

ಪ್ರತಿಭಟನೆಯ ವೇಳೆ ಮುಸ್ಲಿಂ ಮಹಿಳೆಯರು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದೂ ಎಫ್ ಐ ಆರ್ ನಲ್ಲಿ  ದಾಖಲಾಗಿದೆ.

ಇದೀಗ ಮೂವರು ಆರೋಪಿಗಳ ವಿರುದ್ಧ ಐಪಿಸಿ 34, 153 ಅಡಿಯಲ್ಲಿ ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News