ಮಣಿಪಾಲ್ ವಂಚನೆ ಪ್ರಕರಣ: ಪ್ರಮುಖ ಆರೋಪಿಗಳಲ್ಲಿ ಓರ್ವನ ಬಂಧನ
ಬೆಂಗಳೂರು, ನ.20: ನಾರ್ಟೆ ಟೆಕ್ನಾಲಜೀಸ್‍ನ ಸಹಸ್ಥಾಪಕರಾದ ಹಾಗೂ ಮಣಿಪಾಲ್ ವಂಚನೆ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಪ್ರವೀಣ್ ಸುರೇಂದ್ರನ್‍ರನ್ನು ಬೆಂಗಳೂರು ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಬಿಟ್ಟು ಓಡಿಹೋಗಲು ವಿಮಾನ ಏರುವ ಸಂದರ್ಭದಲ್ಲಿ ಗುರುವಾರ ಬಂಧಿಸಲಾಗಿದೆ.
ದೀರ್ಘಕಾಲದಿಂದ ನಡೆಯುತ್ತಿರುವ ಈ ಪ್ರಕರಣವು ಹಲವಾರು ಜನರು ಪೊಲೀಸ್ ಬಲೆಗೆ ಬೀಳುವುದನ್ನು ಕಂಡಿದೆ. ಮಣಿಪಾಲ್ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಸಂದೀಪ್ ಗುರುರಾಜ್ ಮತ್ತು ಪ್ರವೀಣ್ ಸುರೇಂದ್ರನ್ ಅವರು ಮತ್ತೊಂದು ಪ್ರಕರಣದಲ್ಲಿ ಸಿಲುಕಿದ್ದು, ಈ ಹಿಂದೆ ಅವರನ್ನು ಸಂಸ್ಥೆಯೊಂದರ ಅಧಿಕೃತ ಸ್ಥಾಪಕರ ಸಹಿ ನಕಲಿ ಮಾಡಿದ ಆರೋಪದಲ್ಲಿ ಬಂಧಿಸಲಾಗಿತ್ತು.
ಅಧಿಕೃತ ಸ್ಥಾಪಕರಾದ ಸೌರವ್ ಕುಮಾರ್ ಸಿಂಗ್ ಅವರು, ಪೊಲೀಸರು ತಮ್ಮ ದೂರು ದಾಖಲಿಸಬೇಕೆಂದು ಬೆಂಗಳೂರು ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಒಳಾಂಗಣ ವಿನ್ಯಾಸಕಾರ ಸಂಸ್ಥೆಯಾದ ಒಪಿಸಿ ಅಸೆಟ್ಸ್ ಸಲ್ಯೂಷನ್ಸ್‍ನಲ್ಲಿ ಪ್ರವೀಣ್ ಸುರೇಂದ್ರನ್ ಅವರು ಕೆಲಸ ಮಾಡುತ್ತಿದ್ದು, ಈ ಸಂಸ್ಥೆ ಮಣಿಪಾಲ್‍ಗೆ ವೆಂಡರ್ ಸಂಸ್ಥೆಯಾಗಿದ್ದು, ಇಲ್ಲಿ ಪ್ರಮುಖ ಆರೋಪಿಯಾದ ಸಂದೀಪ್ ಗುರುರಾಜ್ ಅವರು ಪ್ರವೀಣ್ ಸುರೇಂದ್ರನ್ ಸಂಪರ್ಕಕ್ಕೆ ಬಂದಿದ್ದರು.
ಸಂದೀಪ್ ಗುರುರಾಜ್ ಅವರು ಮಣಿಪಾಲ್ ಸಮೂಹದ ಹಣಕಾಸು ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕರಾಗಿದ್ದರು. ಈ ಪ್ರಕರಣದಲ್ಲಿ ಕಬ್ಬನ್‍ಪಾರ್ಕ್ ಪೊಲೀಸರು 3,000 ಪುಟದ ಆರೋಪ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಈ ಹಿಂದೆ ಜನವರಿಯಲ್ಲಿ ಮಣಿಪಾಲ್ ಎಜುಕೇಷನ್ ಅಂಡ್ ಮೆಡಿಕಲ್ ಗ್ರೂಪ್(ಎಂಇಎಂಜಿ)ನ ಮಾಜಿ ಉಪ ಪ್ರಧಾನ ವ್ಯವಸ್ಥಾಪಕನಾಗಿದ್ದ ಸಂದೀಪ್ ಗುರುರಾಜ್‍ಗೆ ಸುಪ್ರಿಂ ಕೋರ್ಟ್ ಜಾಮೀನು ನೀಡಿತ್ತು. ಕಂಪನಿ ಖಾತೆಗಳಿಂದ ನಿಧಿಯನ್ನು(62 ಕೋಟಿ ರೂ.ಗಳೆಂದು ವರದಿಯಾಗಿದೆ) ಎಗರಿಸಿದ್ದ ಆರೋಪ ಇವರ ಮೇಲಿದೆ.
ಗುರುರಾಜ್ ಅವರು ಇದಕ್ಕಾಗಿ 14 ನಕಲಿ ಕಂಪನಿಗಳನ್ನು ಸ್ಥಾಪಿಸಿದ್ದು, ಇವುಗಳಲ್ಲಿ 10 ವಿದೇಶದಲ್ಲಿದ್ದವು ಎಂದು ವರದಿಯಾಗಿತ್ತು. ಮಣಿಪಾಲ್ ಖಾತೆಯಿಂದ ತನ್ನ ಸ್ವಂತ ಖಾತೆಗಳಿಗೆ ಹಣ ವರ್ಗಾಯಿಸಲು ಈ ಸಂಸ್ಥೆಗಳನ್ನು ಈತ ಬಳಸಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಮೂರು ಇತರೆ ಆರೋಪಿಗಳಾದ-ಗುರುರಾಜ್ ಪತ್ನಿ ಚಾರುಲತಾ, ಮತ್ತೊಬ್ಬ ಆರೋಪಿ ಅಮೃತ ಚೆಂಗಪ್ಪ ಮತ್ತು ಅಮೃತಾಳ ತಾಯಿ ಮೀರಾ ಚೆಂಗಪ್ಪ ಅವರಿಗೆ ಕರ್ನಾಟಕ ಉಚ್ಛ ನ್ಯಾಯಾಲಯ ಜಾಮೀನು ನೀಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.