ಶನಿವಾರಸಂತೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಸಂಘಪರಿವಾರದಿಂದ ದಾಳಿ: ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು; ಇಬ್ಬರ ಬಂಧನ
ಮಡಿಕೇರಿ ನ.20 : ಸ್ನೇಹಿತೆಗೆ ಬುರ್ಕಾ ನೀಡಿದ ವಿಚಾರವನ್ನೇ ದೊಡ್ಡದು ಮಾಡಿ ವಿದ್ಯಾರ್ಥಿನಿಯರ ಮೇಲೆ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ ಆರೋಪಿಗಳ ವಿರುದ್ಧ ಶನಿವಾರಸಂತೆ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯ ನಿವಾಸಿಗಳಾದ ಪ್ರಜ್ವಲ್ ಹಾಗೂ ಕೌಶಿಕ್ ಎಂಬುವವರನ್ನು ಬಂಧಿಸಲಾಗಿದ್ದು, ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ ಉಳಿದವರನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸಂಜೆ ಶನಿವಾರಸಂತೆಯ ಖಾಸಗಿ ಶಿಕ್ಷಣ ಸಂಸ್ಥೆಯ ಪಿಯು ವಿದ್ಯಾರ್ಥಿನಿಯರ ಮೇಲೆ ಕೆಲವರು ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿಯೋರ್ವಳ ತಂದೆಯ ಹೇಳಿಕೆ ಪ್ರಕಾರ ‘ನನ್ನ ಮಗಳು ಹಾಗೂ ಅವಳ ಸ್ನೇಹಿತೆಯ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ನನ್ನ ಮಗಳು ತನ್ನ ಕಾಲೇಜಿನ ತರಗತಿಗಳಿಗೆ ಹಾಜರಾಗಿದ್ದಳು. ತರಗತಿಗಳಿಗೆ ಪ್ರವೇಶಿಸುವ ಮೊದಲು ಅವರು ಬುರ್ಖಾವನ್ನು ತೆಗೆದು ಹಾಕಬೇಕು. ಹೀಗಾಗಿ ನನ್ನ ಮಗಳು ತನ್ನ ಬುರ್ಖಾವನ್ನು ತೆಗೆದು ಅದೇ ಕಾಲೇಜಿನ ಕ್ರಿಶ್ಚಿಯನ್ ಹುಡುಗಿಗೆ ಬೆಳಿಗ್ಗೆ ನೀಡಿದ್ದಳು. ಕ್ರಿಶ್ಚಿಯನ್ ಹುಡುಗಿ ಗುರುವಾರ ಕಾಲೇಜಿಗೆ ಹಾಜರಾಗಿರಲಿಲ್ಲ. ಹೀಗಾಗಿ ಆಕೆಯ ಸ್ನೇಹಿತೆ ಸಂಜೆ ಬುರ್ಖಾವನ್ನು ಹಿಂದಿರುಗಿಸಲು ಕಾಲೇಜಿನ ಬಳಿ ಕಾಯುತ್ತಿದ್ದರು. ಆದರೆ, ಬುರ್ಖಾವನ್ನು ಹಿಂತಿರುಗಿಸುವಾಗ, ನನ್ನ ಮಗಳು ಮತ್ತು ಅವಳ ಸ್ನೇಹಿತೆಯ ಮೇಲೆ 40 ಕ್ಕೂ ಹೆಚ್ಚು ಗೂಂಡಾಗಳು ದಾಳಿ ನಡೆಸಿದರು. ಅಲ್ಲದೆ ಬಾಲಕಿಯರನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಲಕಿಯ ಬುರ್ಖಾ ಹರಿದಿದೆ ಮತ್ತು ಗಾಯಗಳಾಗಿದ್ದು, ಇವರನ್ನು ಕೊಡ್ಲಿಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯರ ಕುಟುಂಬದವರು ದೂರು ನೀಡಿದ್ದಾರೆ. ಶನಿವಾರಸಂತೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಶನಿವಾರಸಂತೆ ವೃತ್ತ ನಿರೀಕ್ಷಕ ಪರಶಿವ ಮೂರ್ತಿ ತಿಳಿಸಿದ್ದಾರೆ.
ಬುರ್ಕಾವನ್ನು ಹಿಂದೂ ಯುವತಿಗೆ ನೀಡಲಾಗಿದೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಇಬ್ಬರು ವಿದ್ಯಾರ್ಥಿನಿಯರಿಂದ ಒತ್ತಡ ಹೇರಿ ಸ್ಪಷ್ಟೀಕರಣ ಬಯಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಬುರ್ಕಾ ನೀಡಿದ ಬಗ್ಗೆ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರೆ, ಇಬ್ಬರು ವಿದ್ಯಾರ್ಥಿನಿಯರು ವಿಡಿಯೋ ಮಾಡಿ ನಮ್ಮ ಲೈಫ್ ಹಾಳು ಮಾಡಬೇಡಿ ಎಂದು ಕಣ್ಣೀರು ಹಾಕುವ ಮತ್ತು ಸ್ನೇಹಿತೆ ಒತ್ತಾಯ ಮಾಡಿ ನಮ್ಮಿಂದ ಬುರ್ಕಾ ಪಡೆದಿದ್ದಾಳೆ, ಕಾರಣ ತಿಳಿದಿರಲಿಲ್ಲ ಎಂದು ಹೇಳುವ ದೃಶ್ಯ ಕಂಡು ಬಂದಿದೆ.