×
Ad

ಲೂಟಿ ಗ್ಯಾಂಗ್ ಖರ್ಗೆ ಅಂಗಡಿ ಬಂದ್: ನಳಿನ್ ಕುಮಾರ್ ಕಟೀಲು ಲೇವಡಿ

Update: 2021-11-20 18:46 IST

ಕಲಬುರಗಿ, ನ. 20: `ಜಿಲ್ಲೆಯಲ್ಲಿನ ಲೂಟಿ ಗ್ಯಾಂಗ್ ಖರ್ಗೆ ಅಂಗಡಿಯನ್ನು ನೀವು ಬಂದ್ ಮಾಡಿದ್ದೀರಿ. 50 ವರ್ಷಗಳಲ್ಲಿ ಖರ್ಗೆ ಗ್ಯಾಂಗ್ ಲೂಟಿ ಗ್ಯಾಂಗ್ ಆಗಿತ್ತು. ಕಲಬುರ್ಗಿಯನ್ನು ಲೂಟಿ ಮಾಡಿದ್ದರು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.

ಶನಿವಾರ ಜಿಲ್ಲೆಯಲ್ಲಿ ಏರ್ಪಡಿಸಿದ್ದ `ಜನಸ್ವರಾಜ್ ಯಾತ್ರೆ'ಯ ನೇತೃತ್ವ ವಹಿಸಿ ಮಾತನಾಡಿದ ಅವರು, ಏಳು ಸ್ಥಾನ ಇದ್ದ ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಈಗ 24 ಸೀಟುಗಳಿವೆ. ಅದಕ್ಕಾಗಿ ಜಿಲ್ಲೆಯ ಜನರಿಗೆ ಅಭಿನಂದನೆಗಳು. ದೊಡ್ಡ ಖರ್ಗೆಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದೀರಿ. ನಗರಪಾಲಿಕೆ ಚುನಾವಣೆಯಲ್ಲಿ ಸಣ್ಣ ಖರ್ಗೆಯನ್ನು ಊರು ಬಿಡಿಸಿದ್ದೀರಿ. ನಿಮಗೆ ಅಭಿನಂದನೆಗಳು' ಎಂದು ಹೇಳಿದರು.

`ಈ ಚುನಾವಣೆಯಲ್ಲಿ ಖರ್ಗೆ ಅಂಗಡಿ ಬಂದ್ ಮಾಡಿ ಬಿ.ಜಿ.ಪಾಟೀಲರನ್ನು ನೀವು ಗೆಲ್ಲಿಸುವ ವಿಶ್ವಾಸ ಇದೆ. ಗ್ರಾಮ ಸ್ವರಾಜ್ಯದ ಮೂಲಕ ಭಾರತ ರಾಮ ರಾಜ್ಯವಾಗಬೇಕೆಂಬ ಕನಸನ್ನು ಮಹಾತ್ಮ ಗಾಂಧೀಜಿ ಕಂಡಿದ್ದರು. ಗ್ರಾಮಗಳ ಉದ್ಧಾರದ ಮೂಲಕ ದೇಶದ ಅಭಿವೃದ್ಧಿಯ ಕನಸನ್ನು ಗಾಂಧೀಜಿ ಕಂಡರೆ, ಗಾಂಧಿ ಟೋಪಿ ಇಟ್ಟುಕೊಂಡು ಕಾಂಗ್ರೆಸ್ಸಿಗರು ಅಂಗಡಿ ತೆರೆದರು. ಅಂಗಡಿಯಲ್ಲಿ ವ್ಯಾಪಾರ ಮಾಡಿದ ಕಾಂಗ್ರೆಸ್ಸಿಗರು ಕುಟುಂಬ ಅಭಿವೃದ್ಧಿ ಮಾಡಿದರು. ಆದರೆ, ಮೋದಿಯವರು ದೇಶದ ಉದ್ಧಾರ-ಅಭಿವೃದ್ಧಿಗಾಗಿ ಶ್ರಮಿಸಿದರು ಎಂದು ತಿಳಿಸಿದರು.

2014ರ ವರೆಗೆ ಈ ದೇಶದಲ್ಲಿ ಗ್ರಾ.ಪಂ.ಗಳಿಗೆ ನೇರ ಅನುದಾನ ಇರಲಿಲ್ಲ. ಪ್ರತಿ ಪಂಚಾಯಿತಿಗೆ 1 ಕೋಟಿ ರೂ.ಅನುದಾನ ಕೊಟ್ಟ ಪುಣ್ಯಾತ್ಮ ಇದ್ದರೆ ಅದು ಮೋದಿ. ಸಂಸದರಿಗೂ ಆದರ್ಶ ಗ್ರಾಮಗಳ ಪರಿಕಲ್ಪನೆಯನ್ನು ಅವರು ಜಾರಿಗೊಳಿಸಿದ್ದಾರೆ. ಪಂಚಾಯತ್‍ಗಳಿಗೆ ಇಂಟರ್‍ನೆಟ್ ಸಂಪರ್ಕ, ವಿದ್ಯುತ್ ಇಲ್ಲದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಯಿತು. ನರೇಗಾ ಯೋಜನೆಯಡಿ ಪಂಚಾಯತ್‍ಗಳಿಗೆ ನೇರ ಅನುದಾನ ನೀಡಿದ ಶ್ರೇಷ್ಠ ವ್ಯಕ್ತಿ ಮೋದಿಯವರು ಎಂದು ಕಟೀಲ್ ಹೇಳಿದರು.

`ಮನೆಮನೆಗೆ ಗಂಗೆ ಮೂಲಕ ನೀರು ಒದಗಿಸಿದ್ದು, ಶೌಚಾಲಯಗಳ ನಿರ್ಮಾಣ, ಸ್ಮಾರ್ಟ್ ಸಿಟಿಯಡಿ ನಗರಗಳ ಅಭಿವೃದ್ಧಿ ಮಾಡಿದ್ದು ಮೋದಿಯವರು. ಯಡಿಯೂರಪ್ಪ ಅವರು ಸುವರ್ಣ ಗ್ರಾಮ ಮತ್ತಿತರ ಯೋಜನೆ ಅನುಷ್ಠಾನ ಮಾಡಿದರೆ, ಬಸವರಾಜ ಬೊಮ್ಮಾಯಿಯವರು ಅಮೃತ ಯೋಜನೆ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಮುಂದಿನ ಬಾರಿ 5,500 ಪಂಚಾಯತ್‍ಗಳಿಗೆ ಇದನ್ನು ವಿಸ್ತರಿಸಲಾಗುವುದು ಎಂದು ವಿವರಿಸಿದರು.

ಮುಂದಿನ 7 ತಿಂಗಳುಗಳಲ್ಲಿ 5 ಲಕ್ಷ ಮನೆಗಳನ್ನು ಬಡವರಿಗೆ ನೀಡಲಾಗುವುದು. ಪಂಚಾಯತ್ ಸದಸ್ಯರಿಗೆ ಗೌರವಧನ ಕೊಡಲಾಗಿದೆ. ಯಡಿಯೂರಪ್ಪ ಈ ಕಾರ್ಯ ಮಾಡಿದ್ದಾರೆ. ಕೇರಳ ಮಾದರಿಯಲ್ಲಿ ಅನುದಾನ, ಸೌಲಭ್ಯ, ಗೌರವಧನ 10 ಸಾವಿರಕ್ಕೆ ಶಿಫಾರಸು ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಅತ್ಯಂತ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ರಾಜ್ಯದಲ್ಲಿ ರಸ್ತೆಗಳಲ್ಲಿ ಹಿಂದೂಗಳ ಹತ್ಯೆ ಆಗಿಲ್ಲ, ಗೋಹತ್ಯೆ ನಡೆಯುತ್ತಿಲ್ಲ, ಬಾಂಬ್ ಸ್ಫೋಟ ಆಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್‍ನವರಿಗೆ ಹುಚ್ಚು ಹಿಡಿದಿದೆ. ಹುಚ್ಚಿನಿಂದ ಅವರು ಮಾತನಾಡುತ್ತಿದ್ದಾರೆ. ಚುನಾಯಿತ ಪ್ರತಿನಿಧಿಗಳ ಹಕ್ಕು ಮತ್ತು ಜವಾಬ್ದಾರಿಯನ್ನು ನೆನಪಿಸುವುದು, ಸರಕಾರವು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ನೀಡಿದ ಅನುದಾನ ಹಾಗೂ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸುವುದು ಈ ಸಮಾವೇಶದ ಉದ್ದೇಶ. ಈ ಬಾರಿ ಪರಿಷತ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಪಡೆಯುವ ಉದ್ದೇಶ ಈ ಯಾತ್ರೆಯ ಹಿಂದಿದೆ ಎಂದು ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News